ADVERTISEMENT

ಛತ್ತೀಸಗಢ: 25 ನಕ್ಸಲರು ಶರಣು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 15:47 IST
Last Updated 26 ಆಗಸ್ಟ್ 2024, 15:47 IST
   

ಛತ್ತೀಸಗಢ: ಒಟ್ಟು 25 ನಕ್ಸಲರು ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ಶರಣಾದರು ಎಂದು ಪೊಲೀಸರು ತಿಳಿಸಿದ್ದಾರೆ. 

ಶರಣಾದವರಲ್ಲಿ ಐವರ ಸುಳಿವು ನೀಡಿದವರಿಗೆ ಒಟ್ಟು ₹28 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಗಂಗಲೂರ್ ಹಾಗೂ ಭೈರಮ್‌ಗಢದ ಮಾವೋ ಸಂಘಟನೆಗಳಲ್ಲಿ ಶರಣಾದ ನಕ್ಸಲರು ಸಕ್ರಿಯರಾಗಿದ್ದರು.

ಶಂಬತಿ ಮದ್ಕಂ (23) ಹಾಗೂ ಜ್ಯೋತಿ ಪುನೇಮ್ (27) ಎಂಬಿಬ್ಬರು ಮಹಿಳೆಯರು ಹಾಗೂ ಮಹೇಶ್ ಟೇಲಂ ಎಂಬುವವರ ಸುಳಿವು ನೀಡಿದವರಿಗೆ ತಲಾ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು. 

ADVERTISEMENT

ಮದ್ಕಂ 2012ರಿಂದ ಮಾವೋ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಸುಕ್ಮಾ ಬಳಿಯ ಮಿನ್ಪಾ ಗ್ರಾಮದಲ್ಲಿ 2020ರಲ್ಲಿ ನಡೆದಿದ್ದ ಹೊಂಚು ದಾಳಿಯಲ್ಲಿ ಮದ್ಕಂ ಶಾಮೀಲಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು. 

2021ರಲ್ಲಿ 22 ಭದ್ರತಾ ಸಿಬ್ಬಂದಿ ಸಾವಿಗೆ ಕಾರಣವಾಗಿದ್ದ ಬಿಜಾಪುರ ದಾಳಿಯಲ್ಲಿಯೂ ಮದ್ಕಂ ಭಾಗಿಯಾಗಿದ್ದರು ಎಂದು ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್‌ ಯಾದವ್‌ ತಿಳಿಸಿದರು.

ಪುನೇಮ್‌ ಮತ್ತು ಟೇಲಂ ಈ ವರ್ಷ ಮೇನಲ್ಲಿ ಪಿಡಿಯಾ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದರು ಎಂಬ ಆರೋಪವಿದೆ.

ವಿಷ್ಣು ಕರ್ತಂ ಅಲಿಯಾಸ್‌ ಮನು ಮತ್ತು  ಜೈದೇವ್‌ ಪೋಡಿಯಮ್‌ ಅವರ ಸುಳಿವು ನೀಡಿದವರಿಗೆ ಕ್ರಮವಾಗಿ ₹3 ಲಕ್ಷ ಮತ್ತು ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಶರಣಾಗಿರುವ ಗುಡ್ಡು ಕಕೇಮ್‌ ಮತ್ತು ಸುರ್ದು ಪುನೇಮ್‌ ಅವರ ಸುಳಿವು ನೀಡಿದವರಿಗೆ ತಲಾ ₹10,000 ಬಹುಮಾನ ಘೋಷಿಸಲಾಗಿತ್ತು ಎಂದು ತಿಳಿಸಿದರು.

ಶರಣಾದವರಿಗೆ ಸರ್ಕಾರದ ನಿಯಮದ ಅನುಸಾರ ತಲಾ 25,000 ನೆರವು ಮತ್ತು ಪುನರ್‌ವಸತಿ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಇದರೊಂದಿಗೆ ಪ್ರಸಕ್ತ ವರ್ಷ 170 ನಕ್ಸಲರು ಶರಣಾಗಿದ್ದಾರೆ. ಇದೇ ಅವಧಿಯಲ್ಲಿ 346 ನಕ್ಸಲರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪೊಲೀಸರಿಗೆ ಮಾಹಿತಿ ನೀಡಿದ ಆರೋಪ: ಹತ್ಯೆ

ಬಿಜಾಪುರ: ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ನಕ್ಸಲರು ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ನಕ್ಸಲರು ಭಾನುವಾರ ನಡೆಸಿದ ‘ಪಂಚಾಯ್ತಿ’ಯಲ್ಲಿ  ಸೀತು ಮಾದ್ವಿ ಅವರನ್ನು ಹತ್ಯೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮಾದ್ವಿ ಸೇರಿ ಇಬ್ಬರನ್ನು ನಕ್ಸಲರು ತಮ್ಮ ಜೊತೆ ಕರೆದೊಯ್ದಿದ್ದರು. ಬಳಿಕ ಮಾದ್ವಿ ಅವರನ್ನು ಕೊಂದು ಮತ್ತೊಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.