ADVERTISEMENT

ಛತ್ತೀಸಗಡ ಕಾಂಗ್ರೆಸ್ ಬಿಕ್ಕಟ್ಟು; ಸಿಎಂ ಬದಲಾವಣೆ ವಿರೋಧಿಸಿ ಶಾಸಕರು ದೆಹಲಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2021, 16:13 IST
Last Updated 29 ಸೆಪ್ಟೆಂಬರ್ 2021, 16:13 IST
ಛತ್ತೀಸಗಡದ ಆರೋಗ್ಯ ಸಚಿವ ಟಿ.ಎಸ್‌.ಸಿಂಗ್ ದೇವ್‌ ಮತ್ತು ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌
ಛತ್ತೀಸಗಡದ ಆರೋಗ್ಯ ಸಚಿವ ಟಿ.ಎಸ್‌.ಸಿಂಗ್ ದೇವ್‌ ಮತ್ತು ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌   

ನವದೆಹಲಿ: ಛತ್ತೀಸಗಡದ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳು ಎದ್ದಿರುವ ಬೆನ್ನಲ್ಲೇ ಪಕ್ಷದ ಹತ್ತಕ್ಕೂ ಹೆಚ್ಚು ಶಾಸಕರು ಬುಧವಾರ ದೆಹಲಿ ತಲುಪಿದ್ದಾರೆ. ಪಕ್ಷದ ವರಿಷ್ಠರೊಂದಿಗೆ ಮಾತುಕತೆಗೆ ಎದುರು ನೋಡುತ್ತಿದ್ದಾರೆ.

ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರ ಆಪ್ತ ಶಾಸಕರು ದೆಹಲಿಯ ಛತ್ತೀಸಗಡ ಸದನ ತಲುಪಿದ್ದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿರುದ್ಧ ದನಿ ಎತ್ತಿದ್ದಾರೆ.

2018ರ ಡಿಸೆಂಬರ್‌ನಲ್ಲಿ ಭೂಪೇಶ್‌ ಬಘೇಲ್‌ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಎರಡೂವರೆ ವರ್ಷಗಳಿಗೆ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಪ್ರಸ್ತಾಪ ಮುಂದಿಡಲಾಗಿತ್ತು ಹಾಗೂ ಆ ಪ್ರಕಾರವಾಗಿ ಪ್ರಸ್ತುತ ಆರೋಗ್ಯ ಸಚಿವರಾಗಿರುವ ಟಿ.ಎಸ್‌.ಸಿಂಗ್ ದೇವ್‌ ದ್ವಿತಿಯಾರ್ಧದ ಹೊಣೆ ಹೊರಬೇಕಾಗುತ್ತದೆ.

ADVERTISEMENT

ಟಿ.ಎಸ್‌.ಸಿಂಗ್ ದೇವ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಕಾತುರರಾಗಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನ ಹೊರತಾಗಿ ಯಾವುದೇ ಸ್ಥಾನವನ್ನು ಪರಿಗಣಿಸಲೂ ಸಿದ್ಧರಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

'ರಾಜ್ಯದಲ್ಲಿ ನಾಯಕತ್ವ ಬದಲಾವಣೆಯು ಪಂಜಾಬ್‌ ಮತ್ತು ರಾಜಸ್ಥಾನದಂತೆ ಗೊಂದಲಮಯ ಸ್ಥಿತಿಗೆ ಕಾರಣವಾಗಬಹುದು' ಎಂದು ಬಘೇಲ್‌ ಅವರ ಆಪ್ತ ಶಾಸಕರು ಅಭಿಪ್ರಾಯ ಪಟ್ಟಿದ್ದಾರೆ.

ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರು ರಾಜ್ಯ ಸರ್ಕಾರದ ಹೊಣೆಗಾರಿಕೆಯನ್ನು ತಮಗೆ ಮುಂದುವರಿಸುವ ಭರವಸೆ ನೀಡಿರುವುದಾಗಿ ಈ ಹಿಂದೆ ಭೂಪೇಶ್‌ ಬಘೇಲ್‌ ಹೇಳಿದ್ದರು. ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಬಯಸುತ್ತಿರುವವರು ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸುತ್ತಿರುವುದಾಗಿಯೂ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.