ಇಡಿ
ನವದೆಹಲಿ: ‘ಮದ್ಯ ‘ಹಗರಣ’ದ ಮೂಲಕ ₹1,000 ಕೋಟಿ ಹಣ ಮಾಡಿಕೊಂಡು, ಇದರಲ್ಲಿ ₹16.7 ಕೋಟಿಯನ್ನು ತಮ್ಮ ರಿಯಲ್ ಎಸ್ಟೇಟ್ ಯೋಜನೆಗೆ ಬಳಸಿಕೊಂಡಿದ್ದಾರೆ’ ಎಂದು ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರ ಮಗ ಚೈತನ್ಯ ಬಘೆಲ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಆರೋಪಿಸಿದೆ.
ಹುಟ್ಟುಹಬ್ಬದ ದಿನದಂದೇ (ಜುಲೈ 18) ಚೈತನ್ಯ ಅವರನ್ನು ಇ.ಡಿ ಬಂಧಿಸಿದೆ. ಇದಕ್ಕೂ ಮೊದಲು ಚೈತನ್ಯ ಅವರ ಮನೆ ಮೇಲೆ ದಾಳಿ ನಡೆಸಿತ್ತು. ಭೂಪೇಶ್ ಅವರು ಕೂಡ ಇದೇ ಮನೆಯಲ್ಲಿ ವಾಸವಿದ್ದಾರೆ. ಇದೇ ದಿನವೇ ಚೈತನ್ಯ ಅವರನ್ನು ರಾಯಪುರ ನ್ಯಾಯಾಲಯವು ಇ.ಡಿ ವಶಕ್ಕೆ ಒಪ್ಪಿಸಿತು. ಮಂಗಳವಾರ ಮತ್ತೊಮ್ಮೆ ಇದೇ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲಾಗುತ್ತದೆ.
‘ಈ ಹಗರಣದಿಂದಾಗಿ ರಾಜ್ಯದ ಬೊಕ್ಕಸಕ್ಕೆ ತೀವ್ರ ನಷ್ಟವಾಗಿದೆ’ ಎಂದು ಇ.ಡಿ ಹೇಳಿದೆ. ಈ ಹಗರಣವು 2019ರಿಂದ 2022ರ ಅವಧಿಯಲ್ಲಿ ನಡೆದಿದೆ. ಈ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿತ್ತು. ಭೂಪೇಶ್ ಅವರೇ ಮುಖ್ಯಮಂತ್ರಿಯಾಗಿದ್ದರು. ಹಣ ಅಕ್ರಮ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಚೈತನ್ಯ ಅವರನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.