ADVERTISEMENT

ಛತ್ತೀಸಗಢ: ಒಂಬತ್ತು ಮಹಿಳೆಯರು ಸೇರಿ 20 ನಕ್ಸಲರ ಶರಣಾಗತಿ

ಪಿಟಿಐ
Published 3 ಸೆಪ್ಟೆಂಬರ್ 2025, 13:23 IST
Last Updated 3 ಸೆಪ್ಟೆಂಬರ್ 2025, 13:23 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಸುಕ್ಮಾ, ಛತ್ತೀಸಗಢ: ಒಂಬತ್ತು ಮಹಿಳೆಯರು ಸೇರಿ 20 ಮಂದಿ ನಕ್ಸಲರು ಬುಧವಾರ ಇಲ್ಲಿ ಪೊಲೀಸ್‌ ಮತ್ತು ಸಿಆರ್‌ಪಿಎಫ್‌ ಅಧಿಕಾರಿಗಳ ಎದುರು ಶರಣಾದರು. 

ಶರಣಾದವರಲ್ಲಿ ಹೆಚ್ಚಿನವರು ಪೀಪಲ್ಸ್‌ ಲಿಬರೇಷನ್‌ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್ 1ರ ಸದಸ್ಯರು. ‘ಪಿಎಲ್‌ಜಿಎ’ ನಕ್ಸಲರ ಪ್ರಬಲ ಸೇನಾ ದಳವಾಗಿದೆ. 

ಛತ್ತೀಸಗಢ ಸರ್ಕಾರವು ನಕ್ಸಲರ ಪುನರ್ವಸತಿಗಾಗಿ ಜಾರಿಗೊಳಿಸಿರುವ ‘ನಿಯಾದ್‌ ನೆಲ್ಲನಾರ್‌’ (ನಿಮ್ಮ ಮಾದರಿ ಗ್ರಾಮ) ಯೋಜನೆಯು ನಕ್ಸಲರ ಶರಣಾಗತಿ ಹಾದಿಯನ್ನು ಸುಗಮಗೊಳಿಸಿದೆ. ಶರಣಾದ 20 ಮಂದಿಯಲ್ಲಿ 11 ಜನರಿಗೆ ಒಟ್ಟು ₹33 ಲಕ್ಷದಷ್ಟು ನಗದು ಪರಿಹಾರ ಲಭಿಸಿದೆ. 

ADVERTISEMENT

ಶರಣಾದ ‘ಪಿಎಲ್‌ಜಿಎ’ ಸದಸ್ಯೆ ಶರ್ಮಿಳಾ ಅಲಿಯಾಸ್‌ ಉಯ್ಕ ಭೀಮೆ (25), ತಾಟಿ ಕೊಸಿ ಅಲಿಯಾಸ್‌ ಪರ್ಮಿಳಾ (20) ಎಂಬವರಿಗೆ ₹8 ಲಕ್ಷ ಪರಿಹಾರ ಲಭಿಸಿದೆ. ಮುಚಾಕಿ ಹಿದ್ಮಾ (54) ಎಂಬುವರಿಗೆ ₹5 ಲಕ್ಷ ಹಾಗೂ ಇತರೆ ನಾಲ್ವರಿಗೆ ₹4 ಲಕ್ಷ ಮತ್ತೆ ಕೆಲವರಿಗೆ ₹1 ಲಕ್ಷದಂತೆ ಪರಿಹಾರ ಘೋಷಿಸಲಾಗಿದೆ. ಶರಣಾದ ಎಲ್ಲ ನಕ್ಸಲರಿಗೆ ಸರ್ಕಾರದ ಪುನರ್ವಸತಿ ಯೋಜನೆಯಡಿ ತಲಾ ₹50 ಸಾವಿರ ಪರಿಹಾರ ಲಭಿಸಲಿದೆ. 

ಸನ್ಮಾನ:  ‘ಆಪರೇಷನ್‌ ಬ್ಲ್ಯಾಕ್‌ ಫಾರೆಸ್ಟ್‌’ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಆರ್‌ಪಿಎಫ್‌, ಡಿಆರ್‌ಜಿ, ಪೊಲೀಸ್‌ ಅಧಿಕಾರಿಗಳು ಮತ್ತು ಕೋಬ್ರಾ ಯೋಧರನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸನ್ಮಾನಿಸಿದರು. ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ‘ಆಪರೇಷನ್‌ ಬ್ಲ್ಯಾಕ್‌ ಫಾರೆಸ್ಟ್‌’ ಸುವರ್ಣ ಅಧ್ಯಾಯವಾಗಲಿದೆ ಎಂದು ಬಣ್ಣಿಸಿದರು. 

ಎಲ್ಲ ನಕ್ಸಲರು ಶರಣಾಗುವವರೆಗೆ ಅವರನ್ನು ಹಿಡಿಯುವವರೆಗೆ ಅಥವಾ ನಿರ್ಮೂಲನೆ ಮಾಡುವವರೆಗೆ ಮೋದಿ ಸರ್ಕಾರ ವಿರಮಿಸುವುದಿಲ್ಲ. ನಕ್ಸಲ್‌ ಮುಕ್ತ ಭಾರತಕ್ಕೆ  ಬದ್ಧವಾಗಿದ್ದೇವೆ
ಅಮಿತ್‌ ಶಾ ಕೇಂದ್ರ ಗೃಹ ಸಚಿವ 
ಶರಣಾದ ನಕ್ಸಲರಿಗೆ ಪುನರ್ವಸತಿ  ಯೋಜನೆಯಡಿ ಶಿಕ್ಷಣ ಉದ್ಯೋಗ ಆರ್ಥಿಕ ಸ್ವಾವಲಂಬನೆಗೆ ಕ್ರಮ ವಹಿಸಲಾಗಿದೆ. ಶಸ್ತ್ರ ತ್ಯೆಜಿಸಿ ಸಮಾಜ ಮತ್ತು ಕುಟುಂಬದ ಸಂತೋಷವನ್ನು ಅಪ್ಪಿಕೊಳ್ಳಿ 
ಕಿರಣ್‌ ಚವನ್‌ ಸುಕ್ಮಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.