ADVERTISEMENT

ಕಪಾಳಕ್ಕೆ ಹೊಡೆದು, ಮೊಬೈಲ್‌ ಬಿಸಾಡಿದ ಐಎಎಸ್‌ ಅಧಿಕಾರಿ: ವಿಡಿಯೊ ವೈರಲ್‌

ಛತ್ತೀಸ್‌ಗಢ

ಏಜೆನ್ಸೀಸ್
Published 23 ಮೇ 2021, 4:24 IST
Last Updated 23 ಮೇ 2021, 4:24 IST
ಕಪಾಳಕ್ಕೆ ಹೊಡೆಯುತ್ತಿರುವ ಐಎಎಸ್‌ ಅಧಿಕಾರಿ–ವಿಡಿಯೊ ಸ್ಕ್ರೀನ್‌ ಶಾಟ್‌
ಕಪಾಳಕ್ಕೆ ಹೊಡೆಯುತ್ತಿರುವ ಐಎಎಸ್‌ ಅಧಿಕಾರಿ–ವಿಡಿಯೊ ಸ್ಕ್ರೀನ್‌ ಶಾಟ್‌   

ನವದೆಹಲಿ: ಕೋವಿಡ್‌ ನಿಯಂತ್ರಣದ ಭಾಗವಾಗಿ ದೇಶದ ಬಹುತೇಕ ಕಡೆ ಲಾಕ್‌ಡೌನ್‌ ಜಾರಿಯಲಿದ್ದು, ಸುಖಾಸುಮ್ಮನೆ ಹೊರಗೆ ತಿರುಗಿದರೆ ಪೊಲೀಸರು ಪ್ರಶ್ನಿಸುವುದು, ವಾಹನಗಳನ್ನು ಜಪ್ತಿ ಮಾಡುವುದು ವರದಿಯಾಗುತ್ತಿವೆ. ಆದರೆ, ಛತ್ತೀಸ್‌ಗಢದಲ್ಲಿ ಐಎಎಸ್‌ ಅಧಿಕಾರಿಯೊಬ್ಬರು ದಾರಿಹೋಕನೊಬ್ಬನ ಕಪಾಳಕ್ಕೆ ಬಾರಿಸಿ, ಮೊಬೈಲ್‌ ಬಿಸಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಲಾಕ್‌ಡೌನ್‌ ಸಮಯದಲ್ಲಿ ಕೋವಿಡ್‌–19 ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದರೆಂದು ಕುಪಿತರಾದ ಸೂರಜ್‌ಪುರ್‌ನ ಜಿಲ್ಲಾಧಿಕಾರಿ, ವ್ಯಕ್ತಿಯೊಬ್ಬನ ಕಪಾಳಕ್ಕೆ ಹೊಡೆಯುವ ಜೊತೆಗೆ ಜೋರು ಮಾತುಗಳಲ್ಲಿ ಗದರಿಸಿ, ಆತನ ಮೊಬೈಲ್‌ನ್ನು ನೆಲಕ್ಕೆ ಜೋರಾಗಿ ಎಸೆದಿರುವುದನ್ನು ವೈರಲ್‌ ಆಗಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ನಾಗರಿಕನೊಬ್ಬನ ಮೇಲೆ ದೈಹಿಕ ಹಲ್ಲೆ ನಡೆಸಿರುವುದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಜಿಲ್ಲಾಧಿಕಾರಿ ರಣಬೀರ್‌ ಶರ್ಮಾ ಕ್ಷಮೆ ಕೇಳಿದ್ದಾರೆ.

ADVERTISEMENT

'ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ವಿಡಿಯೊದಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಹೊರಗೆ ಬಂದಿದ್ದ ವ್ಯಕ್ತಿಗೆ ನಾನು ಹೊಡೆದಿರುವುದು ದಾಖಲಾಗಿದೆ. ಇವತ್ತಿನ ನನ್ನ ನಡೆತೆಗೆ ಪ್ರಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ವಿಡಿಯೊದಲ್ಲಿ ಕಾಣುವ ವ್ಯಕ್ತಿಗೆ ಅಗೌರವ ಕೊಡುವ ಅಥವಾ ಕೀಳಾಗಿ ಕಾಣುವ ಯಾವುದೇ ಉದ್ದೇಶ ಇರಲಿಲ್ಲ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂಕ್ರಾಮಿಕ ಈ ಸಂದರ್ಭದಲ್ಲಿ ಸೂರಜ್‌ಪುರ್ ಸೇರಿದಂತೆ ಇಡೀ ಛತ್ತೀಸ್‌ಗಢದಲ್ಲಿ ಸಾಕಷ್ಟು ಜೀವ ಹಾನಿಯಾಗಿದೆ. ರಾಜ್ಯ ಸರ್ಕಾರದ ಸಿಬ್ಬಂದಿಗಳಾದ ನಾವೆಲ್ಲರೂ ಈ ಸಮಸ್ಯೆ ನಿಯಂತ್ರಿಸಲು ಕಠಿಣವಾಗಿ ಶ್ರಮಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ರಣಬೀರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್‌–19ನಿಂದ ನಾನು ಚೇತರಿಸಿಕೊಂಡಿದ್ದು, ನನ್ನ ತಾಯಿ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾಳೆ ಎಂದಿರುವ ಅವರು, ಜನರು ಕೋವಿಡ್‌–19 ನಿಯಮಗಳನ್ನು ಕಠಿಣವಾಗಿ ಅನುಸರಿಸುವಂತೆ ಕೋರಿದ್ದಾರೆ.

'ವಿಡಿಯೊದಲ್ಲಿ ಕಾಣುವ 23 ವರ್ಷ ವ್ಯಕ್ತಿಯು ಬೈಕ್‌ನಲ್ಲಿ ಅತಿ ವೇಗವಾಗಿ ಸಾಗುತ್ತಿದ್ದರು. ಆತ ಅಧಿಕಾರಿಗಳೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ' ಎಂದಿದ್ದಾರೆ. ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ಕೋವಿಡ್‌–19 ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.