
ಬಿಲಾಸ್‌ಪುರ (ಛತ್ತೀಸಗಢ): ಛತ್ತೀಸಗಢ ಬಿಲಾಸ್‌ಪುರದಲ್ಲಿ ಮಂಗಳವಾರ ಸಂಭವಿಸಿದ ರೈಲು ಅಪಘಾತದಿಂದಾಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ. ಮೃತಪಟ್ಟವರಲ್ಲಿ 6 ಮಹಿಳೆಯರು ಸೇರಿದ್ದಾರೆ ಎಂದು ಅವರು ಹೇಳಿದ್ದು, 2 ವರ್ಷದ ಬಾಲಕ, 9 ಮಹಿಳೆಯರು ಸೇರಿದಂತೆ 20 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮಂಗಳವಾರ ಸಂಜೆ 4ಕ್ಕೆ ನಿಲ್ದಾಣದ ಬಳಿ ಪ್ರಯಾಣಿಕ ರೈಲೊಂದು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿತ್ತು.
ಮೃತಪಟ್ಟ 11 ಜನರಲ್ಲಿ ಐವರನ್ನು ಲೋಕೊ ಪೈಲಟ್ ವಿದ್ಯಾ ಸಾಗರ್ (53), ಲವಕುಶ ಶುಕ್ಲಾ (41), ರಂಜೀತ್ ಪ್ರಭಾಕರ್ (40), ಶಿಲ್ಪಾ ಯಾದವ್ (25) ಮತ್ತು ಪ್ರಿಯಾ ಚಂದ್ರಾ (21) ಎಂದು ಗುರುತಿಸಲಾಗಿದ್ದು, ಇತರ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರ ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಯಾಣಿಕ ರೈಲಿನ ನಜ್ಜುಗುಜ್ಜಾದ ಬೋಗಿಯ ಅವಶೇಷಗಳ ಅಡಿಯಲ್ಲಿ ಹಲವಾರು ಶವಗಳು ಸಿಲುಕಿಕೊಂಡಿದ್ದರಿಂದ, ಬೋಗಿಯನ್ನು ತೆರವುಗೊಳಿಸಲು ರಕ್ಷಣಾ ಸಿಬ್ಬಂದಿ ಗಂಟೆಗಳ ಕಾಲ ಶ್ರಮಿಸಬೇಕಾಯಿತು. ಅಪಘಾತದಿಂದಾಗಿ ಹಾನಿಗೊಳಗಾಗಿದ್ದ ಮಾರ್ಗವನ್ನು ಬುಧವಾರ ಬೆಳಿಗ್ಗೆ ಮರುಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ತಲಾ ₹10 ಲಕ್ಷ ಮತ್ತು ಗಂಭೀರ ಗಾಯಗೊಂಡವರಿಗೆ ₹5 ಲಕ್ಷ ಪರಿಹಾರವನ್ನು ರೈಲ್ವೆ ಇಲಾಖೆ ಘೋಷಿಸಿದೆ. ಜೊತೆಗೆ ಸಣ್ಣಪುಟ್ಟ ಗಾಯಗಳಾದವರಿಗೆ ₹1 ಲಕ್ಷ ನೆರವು ನೀಡಲಾಗುವುದು ಎಂದು ಅದು ತಿಳಿಸಿದೆ.
ಅಲ್ಲದೆ, ಘಟನೆಯಲ್ಲಿ ಗಾಯಗೊಂಡವರಿಗೆ ಮುಂಗಡ ಪರಿಹಾರವಾಗಿ ತಲಾ ₹50 ಸಾವಿರ ನೀಡಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ರೈಲು ನಿಯಂತ್ರಿಸಲು ಸಿಬ್ಬಂದಿ ವಿಫಲ: ಪ್ರಾಥಮಿಕ ವರದಿ
ಪ್ರಯಾಣಿಕ ರೈಲಿನ ಸಿಬ್ಬಂದಿ ಕೆಂಪು ಸಿಗ್ನಲ್‌ನಲ್ಲಿ ರೈಲನ್ನು ನಿಯಂತ್ರಿಸಲು ವಿಫಲರಾಗಿದ್ದರಿಂದ ಸರಕು ಸಾಗಣೆ ರೈಲಿಗೆ ಅದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ರೈಲ್ವೆ ತಜ್ಞರು ನಡೆಸಿದ ಪ್ರಾಥಮಿಕ ತನಿಖೆಯ ವರದಿ ತಿಳಿಸಿದೆ. ಅಪಾಯದ ಸಿಗ್ನಲ್‌ಗೂ ಮೊದಲು ಸರಿಯಾದ ಸಮಯ ಮತ್ತು ಸ್ಥಳದಲ್ಲಿ ರೈಲನ್ನು ನಿಯಂತ್ರಿಸದಿರುವುದು ಮತ್ತು ಕೆಂಪು ಸಿಗ್ನಲ್ ಮೀರಿದ್ದಕ್ಕೆ ಸಿಬ್ಬಂದಿ ಕಾರಣ ಎಂದು ಅದು ಹೇಳಿದೆ. ಐವರು ತಜ್ಞರು ತನಿಖಾ ವರದಿಯನ್ನು ಸಿದ್ದಪಡಿಸಿದ್ದು ಅದಕ್ಕೆ ಕೇವಲ ಮೂವರು ಮಾತ್ರ ಸಹಿ ಮಾಡಿದ್ದಾರೆ. ಸಿಗ್ನಲ್ ಮತ್ತು ಸಂಹವನ ಇಲಾಖೆಯನ್ನು ಪ್ರತಿನಿಧಿಸುವ ಅಧಿಕಾರಿ ವರದಿಗೆ ಸಹಿ ಹಾಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.