
ಭೋಜಶಾಲಾ – ಕಮಲ್ ಮೌಲಾ ಮಸೀದಿ ಸಂಕೀರ್ಣ
ಕೃಪೆ: ಪಿಟಿಐ
ಇಂದೋರ್(ಮಧ್ಯಪ್ರದೇಶ): ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ– ಕಮಲಾ ಮೌಲಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.
ಈ ಪ್ರಕರಣಗಳನ್ನು ಬುಧವಾರ ಜಬಲ್‌ಪುರದ ಪ್ರಧಾನ ಪೀಠದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂದು ಅರ್ಜಿದಾರರ ಸಂಘಟನೆಯಾದ ಹಿಂದೂ ಫ್ರಂಟ್ ಫಾರ್ ಜಸ್ಟೀಸ್ ಪರ ವಕೀಲ ವಿನಯ್ ಜೋಶಿ ಮಂಗಳವಾರ ತಿಳಿಸಿದ್ದಾರೆ.
ಭೋಜಶಾಲಾ ದೇವಸ್ಥಾನ-ಕಮಲಾ ಮೌಲಾ ಮಸೀದಿ ಸಂಕೀರ್ಣ ವಿವಾದಕ್ಕೆ ಸಂಬಂಧಿಸಿದ ನಾಲ್ಕು ರಿಟ್ ಅರ್ಜಿಗಳನ್ನು ಇಂದೋರ್ ಹೈಕೋರ್ಟ್ ಪೀಠವು ಜಬಲ್‌ಪುರದ ಪ್ರಧಾನ ಪೀಠಕ್ಕೆ ವರ್ಗಾಯಿಸಿದೆ ಎಂದು ಅವರು ಹೇಳಿದ್ದಾರೆ.
ಈ ವಿವಾದಕ್ಕೆ ಸಂಬಂಧಿಸಿದ ಒಂದು ರಿಟ್ ಅರ್ಜಿ ಈಗಾಗಲೇ ಜಬಲ್‌ಪುರ ಪ್ರಧಾನ ಪೀಠದಲ್ಲಿ ಬಾಕಿ ಇದೆ. ಇದನ್ನು ಸೇರಿ ಒಟ್ಟು ಐದು ಪ್ರಕರಣಗಳನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.
ಭೋಜಶಾಲಾ 11ನೇ ಶತಮಾನದ ಐತಿಹಾಸಿಕ ಸ್ಮಾರಕವಾಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅದನ್ನು ಸಂರಕ್ಷಿತ ತಾಣ ಎಂದು ಗುರುತಿಸಿದೆ. ಈ ಸ್ಮಾರಕವು ವಾಗ್ದೇವಿಗೆ (ಸರಸ್ವತಿ ದೇವಿ) ಸಮರ್ಪಿತವಾದದ್ದು ಎಂದು ಹಿಂದೂಗಳು ನಂಬಿದ್ದರೆ, ಮುಸ್ಲಿಮರು ಅದನ್ನು ಕಮಲ್ ಮೌಲಾ ಮಸೀದಿ ಎಂದು ಪರಿಗಣಿಸಿದ್ದಾರೆ.
ಭೋಜಶಾಲಾ ಆವರಣದಲ್ಲಿ ಹಿಂದೂಗಳಿಗೆ ಮಂಗಳವಾರ ಪೂಜೆ ಸಲ್ಲಿಸಲು ಮತ್ತು ಮುಸ್ಲಿಮರಿಗೆ ಶುಕ್ರವಾರ ನಮಾಜ್ ಮಾಡಲು ವ್ಯವಸ್ಥೆ ಮಾಡಿ ಎಎಸ್‌ಐ 2003ರ ಏಪ್ರಿಲ್ 7ರಂದು ಆದೇಶಿಸಿದೆ.
ಭೋಜಶಾಲಾ ತಮ್ಮದು ಎಂದು ಹಿಂದೂಗಳು ಹಾಗೂ ಮುಸ್ಲಿಮರು ಹಕ್ಕು ಪ್ರತಿಪಾದಿಸುತ್ತಾ ಬಂದಿದ್ದಾರೆ. ಇದು ಯಾವ ಸಮುದಾಯಕ್ಕೆ ಸೇರಿದ್ದು ಎಂಬುದನ್ನು ತೀರ್ಮಾನಿಸಲು ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದ ಮೇರೆಗೆ ಅಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿದೆ. ಆದರೆ ಈ ವಿವಾದ ಕುರಿತು ಹೈಕೋರ್ಟ್ ನಿರ್ಧರಿಸುವವರೆಗೆ ಅಲ್ಲಿ ಯಾವುದೇ ಭೌತಿಕ ಉತ್ಖನನ ನಡೆಸಬಾರದು ಮತ್ತು ವೈಜ್ಞಾನಿಕ ಸಮೀಕ್ಷೆಯ ವರದಿ ಆಧರಿಸಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಪೀಠ, ತಾನು 2024ರ ಏಪ್ರಿಲ್ 1ರಂದು ನೀಡಿದ್ದ ತೀರ್ಪನ್ನು 2026ರ ಜನವರಿ 22ರಂದು ಪುನರುಚ್ಚರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.