ADVERTISEMENT

ಅಪಹರಣವಾದ ಮಗು ಬಿಜೆಪಿ ನಾಯಕಿ ಮನೆಯಲ್ಲಿ ಪತ್ತೆ: ಮಾನವ ಕಳ್ಳಸಾಗಣೆ ಜಾಲ ಬಯಲಿಗೆ

ಪಿಟಿಐ
Published 30 ಆಗಸ್ಟ್ 2022, 5:55 IST
Last Updated 30 ಆಗಸ್ಟ್ 2022, 5:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಥುರಾ: ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ಆಗಸ್ಟ್ 24 ರಂದು ನಡೆದಿದ್ದ ಮಗುವೊಂದರ ಅಪಹರಣ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.

ಮಗು ಅಪಹರಣಕ್ಕೆ ಸಂಬಂಧಿಸಿದಂತೆ ಮಥುರಾ ರೈಲ್ವೆ ಪೊಲೀಸರು ಬಹುದೊಡ್ಡ ಮಾನವ ಕಳ್ಳಸಾಗಣೆ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಘಟನೆ ಕುರಿತಂತೆ ಫಿರೋಜಾಬಾದ್ ಸ್ಥಳೀಯ ಬಿಜೆಪಿ ನಾಯಕಿ ವಿನಿತಾ ಅಗರವಾಲ್ ಹಾಗೂ ಅವರ ಪತಿ ಕೃಷ್ಣಮುರಾರಿ ಅಗರವಾಲ್ ಮತ್ತು ಇತರ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?

ADVERTISEMENT

ಆಗಸ್ಟ್ 24 ರಂದು ರಾತ್ರಿ ಮಥುರಾ ರೈಲು ನಿಲ್ದಾಣದಲ್ಲಿ ತನ್ನ ತಾಯಿ ಜೊತೆ ಪ್ಲಾಟ್‌ಫಾರ್ಮ್‌ ಮೇಲೆ ಎರಡು ವರ್ಷದಗಂಡು ಮಗುವೊಂದು ಮಲಗಿತ್ತು. ರಾತ್ರಿ ವೇಳೆ ಬಂದು ವ್ಯಕ್ತಿಯೊಬ್ಬ ಅಕ್ಕ–ಪಕ್ಕ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದ.

ಮಗು ಅಪಹರಣದ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಗುವನ್ನು ಪತ್ತೆ ಹಚ್ಚಲು ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ ರೈಲ್ವೆ ಪೊಲೀಸ್ ಎಸ್‌ಪಿ ಮೊಹಮ್ಮದ್ ಮುಸ್ತಾಕ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.

ಮಗು ಎತ್ತಿಕೊಂಡು ಹೋಗಿದ್ದ ದೀಪ್ ಕುಮಾರ್ ಎಂಬಾತನ ಮೊಬೈಲ್ ಟ್ರೇಸ್ ಮತ್ತು ಆತನ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಗು ಫಿರೋಜಾಬಾದ್ ಬಿಜೆಪಿ ನಾಯಕಿ ವಿನಿತಾ ಮನೆಯಲ್ಲಿ ಇರುವುದು ಗೊತ್ತಾಯಿತು. ಫಿರೋಜಾಬಾದ್ ನಗರಸಭೆ ಕಾರ್ಪೋರೆಟರ್ ಕೂಡ ಆಗಿರುವ ವಿನಿತಾ ಹಾಗೂ ಅವರ ಗಂಡನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಮಾನವ ಕಳ್ಳಸಾಗಣೆ ಜಾಲ ಬಯಲಿಗೆ ಬಂದಿದೆ.

ಹತ್ರಾಸ್‌ನ ವೈದ್ಯ ದಂಪತಿ ಪ್ರೇಮ್ ಬಿಹಾರಿ ಹಾಗೂ ದಯಾವತಿ ಅವರು ಈ ಪ್ರಕರಣದ ಕಿಂಗ್‌ಪಿನ್ ಎನ್ನಲಾಗಿರುವ ವಿನಿತಾ ಜೊತೆಯಾಗಿ ಮಾನವ ಕಳ್ಳಸಾಗಣೆ ಜಾಲವನ್ನು ನಡೆಸುತ್ತಿದ್ದರು. ಇವರು ತಮ್ಮ ತಂಡದ ಸದಸ್ಯರ ಮೂಲಕ ರೈಲು ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಮಕ್ಕಳನ್ನು ಕಳ್ಳತನ ಮಾಡಿಸಿ, ಆ ಮಕ್ಕಳನ್ನು ಮಕ್ಕಳಿಲ್ಲದವರಿಗೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಮಥುರಾ ರೈಲು ನಿಲ್ದಾಣದಲ್ಲಿ ಕದ್ದ ಮಗುವಿಗಾಗಿ ಈ ವೈದ್ಯ ದಂಪತಿ ಬಳಿ ದೀಪ್ ಕುಮಾರ್ ₹1.80 ರೂಪಾಯಿ ಪಡೆದಿದ್ದ. ಆತನಿಂದ ₹80 ಸಾವಿರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಈ ಜಾಲದ ಸದಸ್ಯರು ಎನ್ನಲಾದ ಹತ್ರಾಸ್ ಸರ್ಕಾರಿ ಆಸ್ಪತ್ರೆಯ ಸೂಲಗಿತ್ತಿ ಪೂನಮ್, ಸಿಬ್ಬಂದಿಗಳಾದ ವಿಮಲೇಶ್, ಮಂಜಿತ್ ಎನ್ನುವರನ್ನು ಕೂಡ ಬಂಧಿಸಲಾಗಿದೆ.

ಈ ಮೂಲಕ ರೈಲ್ವೆ ಪೊಲೀಸರು ಫಿರೋಜಾಬಾದ್, ಮಥುರಾ, ಆಗ್ರಾ ಸುತ್ತಮುತ್ತ ನಡೆಯುತ್ತಿದ್ದ ಮಕ್ಕಳ ಕಳ್ಳಸಾಗಣೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.