ADVERTISEMENT

ಲಸಿಕೆ ನಿಧಾನ: ಅಪಾಯದಲ್ಲಿ 8 ಕೋಟಿ ಮಕ್ಕಳು

ಪಿಟಿಐ
Published 24 ಮೇ 2020, 19:22 IST
Last Updated 24 ಮೇ 2020, 19:22 IST
ಮಗುವಿಗೆ ಪೊಲಿಯೊ ಲಸಿಕೆ
ಮಗುವಿಗೆ ಪೊಲಿಯೊ ಲಸಿಕೆ   

ನವದೆಹಲಿ: ಕೊರೊನಾ ವೈರಾಣು ಪಸರಿಸುವಿಕೆ ತಡೆಗಾಗಿ ಹೇರಲಾದ ಲಾಕ್‌ಡೌನ್‌ನಿಂದ ನಿಯಮಿತವಾಗಿ ನಡೆಸಲಾಗುತ್ತಿದ್ದ ಲಸಿಕೆ ಕಾರ್ಯಕ್ರಮಗಳು ನಿಂತು ಹೋಗಿವೆ. ಇದರಿಂದಾಗಿ ಗಂಟಲು ಮಾರಿ, ದಡಾರ, ಪೋಲಿಯೊದಂತಹ ರೋಗಗಳಿಗೆಮಕ್ಕಳು ತುತ್ತಾಗುವ ಅಪಾಯ ಎದುರಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಈ ವಿಚಾರಕ್ಕೆ ಸಂಬಂಧಿಸಿ ವರದಿಯೊಂದನ್ನು ಪ್ರಕಟಿಸಿದೆ. ಜಗತ್ತಿನಲ್ಲಿ ಒಂದು ವರ್ಷದ ಒಳಗಿನ 8 ಕೋಟಿಗೂ ಹೆಚ್ಚು ಮಕ್ಕಳು ಗಂಟಲು ಮಾರಿ, ದಡಾರ, ಪೋಲಿಯೊದಂತಹ ರೋಗಕ್ಕೆ ಒಳಗಾಗಬಹುದು ಎಂಬ ಕಳವಳವನ್ನು ಈ ವರದಿಯಲ್ಲಿ ವ್ಯಕ್ತಪಡಿಸಲಾಗಿದೆ.

ಭಾರತದಲ್ಲಿ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮಗಳ ಅಡಿಯಲ್ಲಿ ಪ್ರತಿ ತಿಂಗಳು 20–22 ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ. ವರ್ಷಕ್ಕೆ 2.6 ಕೋಟಿ ಮಕ್ಕಳು ಲಸಿಕೆ ಪಡೆಯುತ್ತಾರೆ ಎಂದು ಸರ್ಕಾರದ ಅಂಕಿ ಅಂಶ ಹೇಳುತ್ತದೆ.

ADVERTISEMENT

ಲಾಕ್‌ಡೌನ್‌ನ ಮೊದಲ ಎರಡು ಹಂತಗಳ 40 ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಜನರು ಲಸಿಕೆ ಶಿಬಿರಗಳಿಗೆ ಬರಲು ಸಾಧ್ಯವಾಗಿಲ್ಲ. ಹಾಗೆಯೇ, ಕೋವಿಡ್‌ ಪಿಡುಗು ನಿಯಂತ್ರಣದಲ್ಲಿ ತೊಡಗಿಕೊಂಡ ಕೆಲವು ರಾಜ್ಯಗಳು ಲಸಿಕೆ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದವು.

‘ಹಲವು ರಾಜ್ಯಗಳು ನಿಯಮಿತ ಆರೋಗ್ಯ ಚಟುವಟಿಕೆಗಳನ್ನು ರದ್ದು ಮಾಡಿವೆ. ಇದರಿಂದಾಗಿ 15 ಲಕ್ಷಕ್ಕೂ ಹೆಚ್ಚು ಮಕ್ಕಳು ಲಸಿಕೆಯಿಂದ ವಂಚಿತರಾಗಿದ್ದಾರೆ. ರಾಜ್ಯಗಳಲ್ಲಿ ಲಸಿಕೆ ಅಭಿಯಾನಗಳು ಮತ್ತೆ ಆರಂಭ ಆಗಿವೆ. ಆದರೆ, ಕಳೆದ ಎರಡು ತಿಂಗಳ ಬಾಕಿ ಪೂರೈಸುವುದೇ ದೊಡ್ಡ ಸವಾಲು’ ಎಂದು ಜನ ಸ್ವಾಸ್ಥ್ಯ ಅಭಿಯಾನದ ಸದಸ್ಯೆ ಛಾಯಾ ಪಚೌಲಿ ಹೇಳಿದ್ದಾರೆ. ಆದರೆ, ಎಷ್ಟು ಮಕ್ಕಳಿಗೆ ಲಸಿಕೆ ಹಾಕಲು ಬಾಕಿ ಇದೆ ಎಂಬ ಅಧಿಕೃತ ಅಂಕಿ ಅಂಶ ಲಭ್ಯವಿಲ್ಲ.

ಶೇ 49ರಷ್ಟು ಮಕ್ಕಳಿಗೆ ಲಸಿಕೆ ಇಲ್ಲ

ಮಕ್ಕಳ ಮೇಲೆ ಕೋವಿಡ್‌–19ರ ಪರಿಣಾಮ ಎಂಬ ಆನ್‌ಲೈನ್‌ ಸಮೀಕ್ಷೆಯನ್ನು ಚೈಲ್ಡ್‌ ರೈಟ್ಸ್‌ ಆ್ಯಂಡ್‌ ಯು (ಕ್ರೈ) ಸಂಸ್ಥೆಯು ಇತ್ತೀಚೆಗೆ ನಡೆಸಿದೆ. ಲಾಕ್‌ಡೌನ್‌ ಅವಧಿಯಲ್ಲಿ ತಮ್ಮ 0–5 ವರ್ಷದ ಮಕ್ಕಳಿಗೆ ಲಸಿಕೆ ಮತ್ತು ಇತರ ಮೂಲಭೂತ ಆರೋಗ್ಯ ಸೇವೆ ಲಭ್ಯವಾಗಿಲ್ಲ ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಹೆತ್ತವರಲ್ಲಿ ಶೇ 49ರಷ್ಟು ಮಂದಿ ಹೇಳಿದ್ದಾರೆ.

ಲಸಿಕೆ ಹಾಕಿಸದಿರುವುದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಕುಸಿಯುತ್ತದೆ. ಮಾರಣಾಂತಿಕ ಸೋಂಕು ಮತ್ತು ರೋಗಗಳಿಗೆ ಮಕ್ಕಳು ಒಳಗಾಗಬಹುದು ಎಂದು ಕ್ರೈ ವರದಿಯಲ್ಲಿ ಹೇಳಲಾಗಿದೆ.

ಕೇಂದ್ರದ ಮಾರ್ಗಸೂಚಿ

ಕೋವಿಡ್‌ ಪಿಡುಗಿಗೆ ಸಂಬಂಧಿಸಿ ಕೆಂಪು ವಲಯದಲ್ಲಿ ಇರುವ ಪ್ರದೇಶಗಳಲ್ಲಿಯೂ ಹುಟ್ಟಿದ ತಕ್ಷಣ ಮಕ್ಕಳಿಗೆ ಹಾಕುವ ಲಸಿಕೆಯನ್ನು ಆರೋಗ್ಯ ಕೇಂದ್ರಗಳು ತಪ್ಪಿಸಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮೇ 21ರಂದು ಪ್ರಕಟಿಸಿದ ಮಾರ್ಗಸೂಚಿಯಲ್ಲಿ ಹೇಳಿದೆ.

ಆದರೆ, ಕಂಟೈನ್‌ಮೆಂಟ್‌ ವಲಯಗಳಲ್ಲಿ ಇತರ ಲಸಿಕೆಗಳ ನೀಡಿಕೆಯನ್ನು ನಿಲ್ಲಿಸಬೇಕು. ಇಂತಹ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರದ ಹೊರಗೆ ಲಸಿಕೆ ಶಿಬಿರಗಳನ್ನು ನಡೆಸಬಾರದು. ಆರೋಗ್ಯ ಕೇಂದ್ರಕ್ಕೆ ಮಕ್ಕಳನ್ನು ಕರೆ ತಂದರೆ ಲಸಿಕೆ ನೀಡಲೇಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.