ADVERTISEMENT

ಆಟೋಟಕ್ಕೆ ಮಕ್ಕಳ ಹಿಂದೇಟು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 18:46 IST
Last Updated 28 ನವೆಂಬರ್ 2019, 18:46 IST
   

ಭಾರತದ ಹದಿಹರೆಯದ ವಯಸ್ಸಿನವರು (11ರಿಂದ 17ವರ್ಷ) ಜಾಗತಿಕವಾಗಿ ತಮ್ಮ ಓರಗೆಯವರಿಗಿಂತ ಹೆಚ್ಚು ಚಟುವಟಿಕೆಯಿಂದ ಇದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ತಿಳಿಸಿದೆ. ಆದರೆ, ಮಕ್ಕಳು ಆಟೋಟದಲ್ಲಿ ಎಷ್ಟು ಭಾಗವಹಿಸಬೇಕೋ ಅಷ್ಟು ಪ್ರಮಾಣದಲ್ಲಿ ಭಾಗವಹಿಸುತ್ತಿಲ್ಲ ಎಂಬ ಕಳವಳವನ್ನೂ ವ್ಯಕ್ತಪಡಿಸಿದೆ. ದಿ ಲ್ಯಾನ್ಸೆಂಟ್ ಚೈಲ್ಡ್ ಅಂಡ್ ಅಡೊಲಸೆಂಟ್ ಹೆಲ್ತ್‌ ನಿಯತಕಾಲಿಕದಲ್ಲಿ ಈ ಕುರಿತ ವರದಿ ಪ್ರಕಟವಾಗಿದೆ.

ವ್ಯಾಯಾಮದ ಕೊರತೆ

ಸದಾ ಚಟುವಟಿಕೆಯಿಂದಿರಲು ಓಟ, ನಡಿಗೆ, ಸೈಕ್ಲಿಂಗ್‌ ಅಥವಾ ಏನಾದರೂ ದೈಹಿಕ ಕೆಲಸ ಅತ್ಯಗತ್ಯಇಲ್ಲವಾದಲ್ಲಿ ಮುಂದೆ ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಮೂರನೇ ಎರಡರಷ್ಟು ದೇಶಗಳಲ್ಲಿ ಹುಡುಗಿಯರು ವ್ಯಾಯಾಮ ಚಟುವಟಿಕೆಯಲ್ಲಿ ಹಿಂದಿರುವುದು ಕಳವಳಕಾರಿ

ADVERTISEMENT

ಭಾರತದ ಮಟ್ಟಿಗೆ ಹದಿಹರೆಯದವರಲ್ಲಿ ಚಟುವಟಿಕೆಯ ಪ್ರಮಾಣ 2001ಕ್ಕೆ ಹೋಲಿಸಿದರೆ 2016ರಲ್ಲಿ ಕೊಂಚವೇ ಏರಿಕೆಯಾಗಿದೆ. ಈ ಅವಧಿಯಲ್ಲಿ ಹುಡುಗರು ಸುಧಾರಿಸಿದ್ದರೆ, ಹುಡುಗಿಯರ ಚಟುವಟಿಕೆ ಪ್ರಗತಿ ತೀರಾ ನಗಣ್ಯ. ಅಮೆರಿಕ ಮತ್ತು ಐರ್ಲೆಂಡ್‌ನಲ್ಲಿ ಮಕ್ಕಳ ಚಟುವಟಿಕೆ ಇತರೆ ದೇಶಗಳಿಗೆ ಹೋಲಿಸಿದರೆ ಉತ್ತಮ. ಜಾಗತಿಕವಾಗಿ ಹುಡುಗಿಯರು ಹುಡುಗರಿಗಿಂತ ಹಿಂದಿದ್ದಾರೆ. ಆಟೋಟಗಳಿಗೆ ಮೀಸಲಿಡದ ಹುಡುಗಿಯರ ‍‍ಪ್ರಮಾಣ ಶೇ 85ರಷ್ಟಿದ್ದರೆ, ಹುಡುಗರ ಪ್ರಮಾಣ ಶೇ 78ರಷ್ಟಿದೆ.

ಹದಿಹರೆಯದವರು ದಿನಕ್ಕೆ ಕನಿಷ್ಠ 1 ಗಂಟೆಯಷ್ಟಾದರೂ ಚಟುವಟಿಕೆಯಿಂದ ಇರಬೇಕು ಎಂದು ಡಬ್ಲ್ಯುಎಚ್‌ಒ ಶಿಫಾರಸು ಮಾಡಿದೆ. ಬಹುತೇಕ ರಾಷ್ಟ್ರಗಳ ಹದಿಹರೆಯದವರಲ್ಲಿ ಚಟುವಟಿಕೆ ಕೊರತೆ ಕಂಡುಬಂದಿದೆ

ಹೆಚ್ಚು ಆದಾಯದ ಪಾಶ್ಚಿಮಾತ್ಯ ದೇಶಗಳು ಮತ್ತು ದಕ್ಷಿಣ ಏಷ್ಯಾ ದೇಶಗಳಲ್ಲಿ ಚಟುವಟಿಕೆ ಕೊರತೆ ಕಂಡುಬಂದಿದೆ. ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಕ್ರಿಕೆಟ್ ಬಗ್ಗೆ ಹೆಚ್ಚು ಒಲವು ಇರುವ ಕಾರಣ, ಹುಡುಗರು ಆಟದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಸಾಮಾಜಿಕ ಕಾರಣಗಳಿಗಾಗಿ ಕ್ರೀಡೆಯಂತಹ ಚಟುವಟಿಕೆಗಳಿಂದ ಹುಡುಗಿಯರು ದೂರವಿದ್ದು, ಅವರಿಗೆ ಪ್ರೋತ್ಸಾಹದ ಅಗತ್ಯವಿದೆ.

ಅಮೆರಿಕದಲ್ಲಿ ದೈಹಿಕ ಚಟುವಟಿಕೆಗಳಿಗೆ ಶಾಲಾ–ಕಾಲೇಜುಗಳಲ್ಲಿಯೇ ಹೆಚ್ಚು ಒತ್ತು ನೀಡಲಾಗುತ್ತಿದೆ. ಶಾಲಾ ಪಠ್ಯದಲ್ಲಿ ಕ್ರೀಡೆಗೆ ಮಹತ್ವವಿದ್ದು, ಮಾಧ್ಯಮಗಳು ಆದ್ಯತೆ ನೀಡುತ್ತಿವೆ. ಐಸ್‌ ಹಾಕಿ, ಫುಟ್‌ಬಾಲ್‌, ಬೇಸ್‌ ಬಾಲ್ ಸೇರಿದಂತೆ ಕ್ರೀಡಾ ಕ್ಲಬ್‌ಗಳು ಅಲ್ಲಿ ಸಕ್ರಿಯವಾಗಿರುವುದೂ ಒಂದು ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.