ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಬೃಹತ್ ಜಲಾಶಯ ನಿರ್ಮಿಸುತ್ತಿದ್ದು, ಭಾರತದ ಪಾಲಿಗೆ ಅದೊಂದು ‘ವಾಟರ್ ಬಾಂಬ್’ ಎಂದು ಮುಖ್ಯಮಂತ್ರಿ ಪೆಮಾ ಖಂಡು ಹೇಳಿದ್ದಾರೆ. ಚೀನಾದ ಮಿಲಿಟರಿ ಬೆದರಿಕೆ ಬಳಿಕ ಇದೊಂದು ದೊಡ್ಡ ಬೆದರಿಕೆಯಾಗಿದೆ ಎಂದಿದ್ದಾರೆ.
ಮಂಗಳವಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಖಂಡು, ಯಾರ್ಲುಂಗ್ ತ್ಸಾಂಗ್ಪ(ಬ್ರಹ್ಮಪುತ್ರ) ನದಿಗೆ ನಿರ್ಮಿಸಲಾಗುತ್ತಿರುವ ವಿಶ್ವದ ಅತಿದೊಡ್ಡ ಅಣೆಕಟ್ಟು, ಭಾರತದ ಪಾಲಿಗೆ ಗಂಭೀರ ಕಳವಳಕಾರಿ ವಿಷಯವಾಗಿದೆ ಎಂದು ಹೇಳಿದ್ದಾರೆ. ಚೀನಾ ಅಂತರರಾಷ್ಟ್ರೀಯ ಜಲ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಒಂದೊಮ್ಮೆ ಸಹಿ ಹಾಕಿದ್ದರೆ, ಅಂತರರಾಷ್ಟ್ರೀಯ ಮಾನದಂಡಗಳನ್ನು ಪಾಲಿಸುವಂತೆ ಒತ್ತಾಯಿಸಬಹುದಿತ್ತು ಎಂದಿದ್ಧಾರೆ.
ಸಮಸ್ಯೆಯೆಂದರೆ ಚೀನಾವನ್ನು ನಂಬಲು ಸಾಧ್ಯವಿಲ್ಲ. ಅವರು ಏನು ಮಾಡುತ್ತಾರೆಂದು ಯಾರಿಗೂ ತಿಳಿದಿಲ್ಲ ಎಂದು ಖಂಡು ಆತಂಕ ವ್ಯಕ್ತಪಡಿಸಿದ್ದಾರೆ.
‘ಚೀನಾದಿಂದ ಮಿಲಿಟರಿ ಬೆದರಿಕೆಯನ್ನು ಹೊರತುಪಡಿಸಿ, ಇದು ಬೇರೆ ಎಲ್ಲದಕ್ಕಿಂತ ದೊಡ್ಡ ಸಮಸ್ಯೆಯಾಗಿದೆ ಎಂದು ನನಗೆ ತೋರುತ್ತದೆ. ಇದು ನಮ್ಮ ಬುಡಕಟ್ಟು ಜನಾಂಗ ಮತ್ತು ನಮ್ಮ ಜೀವನೋಪಾಯಕ್ಕೆ ಅಸ್ತಿತ್ವದ ಬೆದರಿಕೆಯನ್ನು ಉಂಟುಮಾಡಲಿದೆ. ಇದು ತುಂಬಾ ಗಂಭೀರವಾಗಿದೆ. ಏಕೆಂದರೆ, ಚೀನಾ ಇದನ್ನು ಒಂದು ರೀತಿಯ 'ವಾಟರ್ ಬಾಂಬ್' ಆಗಿಯೂ ಬಳಸಬಹುದು’ಎಂದು ಅವರು ಹೇಳಿದ್ದಾರೆ.
2021ರಲ್ಲಿ ಚೀನಾದ ಪ್ರಧಾನಿ ಲಿ ಕೆಕಿಯಾಂಗ್, ಗಡಿ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಯಾರ್ಲುಂಗ್ ತ್ಸಾಂಗ್ಪೋ ಅಣೆಕಟ್ಟು ಯೋಜನೆಯನ್ನು ಘೋಷಿಸಿದ್ದರು.
ವರದಿಗಳ ಪ್ರಕಾರ, ಚೀನಾ 2024 ರಲ್ಲಿ 137 ಶತಕೋಟಿ ಡಾಲರ್(₹11.74 ಲಕ್ಷ ಕೋಟಿ) ವೆಚ್ಚದ ಐದು ವರ್ಷಗಳ ಜಲಾಶಯ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಿತ್ತು. ಈ ಜಲಾಶಯದ ಮೂಲಕ 60,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ. ಇದು ವಿಶ್ವದ ಅತಿದೊಡ್ಡ ಜಲವಿದ್ಯುತ್ ಯೋಜನೆಯ ಅಣೆಕಟ್ಟಾಗಿದೆ.
ಚೀನಾ ಅಂತರರಾಷ್ಟ್ರೀಯ ಜಲ ಒಪ್ಪಂದಕ್ಕೆ ಸಹಿ ಹಾಕಿದ್ದರೆ, ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಏಕೆಂದರೆ, ಒಪ್ಪಂದದ ಅನ್ವಯ ಜಲಚರ ಮತ್ತು ಸಮುದ್ರ ಜೀವಿಗಳಿಗಾಗಿ ಜಲಾನಯನ ಪ್ರದೇಶಕ್ಕೆ ನಿರ್ದಿಷ್ಟ ಪ್ರಮಾಣದ ನೀರನ್ನು ಕೆಳಮುಖವಾಗಿ ಬಿಡುಗಡೆ ಮಾಡುವುದು ಕಡ್ಡಾಯವಾಗಿರುತ್ತದೆ. ಆದರೆ, ಚೀನಾ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಅದು ಏನು ಮಾಡುತ್ತದೋ ಎಂಬುದು ಆತಂಕಕಾರಿಯಾಗಿದೆ ಎಂದು ಖಂಡು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.