ADVERTISEMENT

ಲಿಪುಲೇಖ್‌ ಗಡಿಯಲ್ಲಿ ಚೀನಾ ಸೇನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 20:48 IST
Last Updated 1 ಆಗಸ್ಟ್ 2020, 20:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತ– ನೇಪಾಳ ಮಧ್ಯೆ ಹೊಸ ವಿವಾದಕ್ಕೆ ಕಾರಣವಾಗಿರುವ ಲಿಪುಲೇಖ್‌ ಪಾಸ್‌ ಬಳಿ, ಚೀನಾ ತನ್ನ ಸೇನಾ ಜಮಾವಣೆಯನ್ನು ಹೆಚ್ಚಿಸಿದೆ.

ಲಿಪುಲೇಖ್‌ ಪಾಸ್‌ ವಿಚಾರದಲ್ಲಿ ಭಾರತದ ಜತೆಗೆ ತಗಾದೆ ತೆಗೆಯುವಂತೆ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರಿಗೆ ಕುಮ್ಮಕ್ಕು ನೀಡಿದ್ದ ಚೀನಾ, ಈಗ ಮೂರು ರಾಷ್ಟ್ರಗಳ ಗಡಿಗಳು ಸಂಧಿಸುವ ಈ ಪ್ರದೇಶದಲ್ಲಿ ಸೇನೆಯ ಜಮಾವಣೆ ಹೆಚ್ಚಿಸುವ ಮೂಲಕ ಭಾರತಕ್ಕೆ ಎಚ್ಚರಿಸುವ ಸಂದೇಶ ರವಾನಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಎರಡು ತಿಂಗಳಹಿಂದೆ ಗಡಿ ಸಂಘರ್ಷ ನಡೆದ ಸ್ಥಳದಿಂದ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಸಹ ಚೀನಾ ನಿಧಾನಗೊಳಿಸಿದೆ.

ಲಿಪುಲೇಖ್‌ ಪಾಸ್‌ ಬಳಿ ಚೀನಾ ಸೇನೆಯ ಚಟುವಟಿಕೆಗಳು ಹೆಚ್ಚಿರುವುದನ್ನು ಮನಗಂಡಿರುವ ಭಾರತವೂ ಅಲ್ಲಿಗೆ ಸೇನಾ
ಪಡೆಗಳನ್ನು ನಿಯೋಜಿಸಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಕೆಲವು ತಿಂಗಳ ಹಿಂದೆಯಷ್ಟೇ ಭಾರತದ ಸುಮಾರು 400 ಚದರ ಕಿ.ಮೀ. ಪ್ರದೇಶವನ್ನು ತನ್ನದೆಂದು ವಾದಿಸಿದ ನೇಪಾಳ ಸರ್ಕಾರವು, ಆ ಕುರಿತ ಹೊಸ ನಕ್ಷೆಯನ್ನು ತಯಾರಿಸಿ ಸಂಸತ್ತಿನ ಅನುಮೋದನೆಯನ್ನೂ ಪಡೆದಿತ್ತು. ಇದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿತ್ತು. ‘ನೇಪಾಳದ ಈ ನಡೆಯ ಹಿಂದೆ ಚೇನಾದ ಕುಮ್ಮಕ್ಕು ಇದೆ’ ಎಂದು ಭಾರತ ಆರೋಪಿಸಿತ್ತು. ತಾನು ರೂಪಿಸಿರುವ ಹೊಸ ನಕ್ಷೆಗೆ ಮಾನ್ಯತೆ ನೀಡುವಂತೆ ಒತ್ತಾಯಿಸಿ ಅದನ್ನು ವಿಶ್ವ ಸಂಸ್ಥೆಗೆ ಕಳುಹಿಸಲು ಮತ್ತು ಗೂಗಲ್‌ ಸಂಸ್ಥೆಗೂ ಈ ಮ್ಯಾಪ್‌ ಕಳುಹಿಸಿ, ಗೂಗಲ್‌ ಮ್ಯಾಪ್‌ನಲ್ಲಿ ಇನ್ನು ಮುಂದೆ ಲಿಪುಲೇಖ್ ಪಾಸ್‌ ಅನ್ನು ನೇಪಾಳದ ಭಾಗವೆಂದು ತೋರಿಸಬೇಕು ಎಂದು ಸೂಚಿಸಲು ನೇಪಾಳ ನಿರ್ಧರಿಸಿದೆ.

ಕಳೆದ ಕೆಲವು ವಾರಗಳಿಂದ ಭಾರತ ಗಡಿಯಲ್ಲಿರುವ ತನ್ನ ನಾಲ್ಕು ಗಡಿ ಠಾಣೆಗಳಲ್ಲಿ ನೇಪಾಳವು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.