ADVERTISEMENT

ಅರುಣಾಚಲದ 15 ಸ್ಥಳಗಳ ಹೆಸರು ಬದಲಿಸಿದ ಚೀನಾ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 1:23 IST
Last Updated 31 ಡಿಸೆಂಬರ್ 2021, 1:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಅರುಣಾಚಲ ಪ್ರದೇಶದ 15 ಸ್ಥಳಗಳ ಹೆಸರುಗಳನ್ನು ಚೀನಾ ಬದಲಿಸಿದೆ. ಈಶಾನ್ಯದ ಈ ರಾಜ್ಯದ ಮೇಲೆ ತನಗೆ ಹಕ್ಕು ಇದೆ ಎಂಬುದನ್ನು ತೋರಿಸುವುದು ಇದರ ಉದ್ದೇಶ. ಪೂರ್ವ ಲಡಾಖ್‌ನ ಗಡಿಯಲ್ಲಿ ಭಾರತ–ಚೀನಾ ಸೈನಿಕರ ನಡುವೆ 20 ತಿಂಗಳಿಂದ ಸಂಘರ್ಷ ನಡೆಯುತ್ತಿದ್ದು, ಅದರ ನಡುವಲ್ಲಿಯೇ ಚೀನಾ ಈ ಕ್ರಮ ಕೈಗೊಂಡಿದೆ.

ಝಂಗಾಂಗ್‌ ಅಥವಾ ದಕ್ಷಿಣ ಷಿಝಾಂಗ್‌ನ (ಟಿಬೆಟ್‌ ಸ್ವಾಯತ್ತ ಪ್ರದೇಶ) 15 ಸ್ಥಳಗಳಿಗೆ ಮ್ಯಾಂಡರಿನ್‌ ಭಾಷೆಯ ಹೆಸರು ಇರಿಸಲಾಗಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

ಅರುಣಾಚಲ ಪ್ರದೇಶದಲ್ಲಿ 90 ಸಾವಿರ ಚದರ ಕಿಲೋಮೀಟರ್ ಪ್ರದೇಶವು ತನ್ನದು ಎಂದು ಚೀನಾ ಹೇಳುತ್ತಿದೆ. ಈ ಪ್ರದೇಶವನ್ನು ಝಂಗಾಂಗ್‌ ಅಥವಾ ದಕ್ಷಿಣ ಚೀನಾ ಎಂದು ಕರೆಯುತ್ತಿದೆ. ಆದರೆ, ಅರುಣಾ
ಚಲ ಪ್ರದೇಶವು ತನ್ನ ಅವಿಭಾಜ್ಯ ಅಂಗ ಎಂದು ಭಾರತ ಹೇಳುತ್ತಿದೆ.

ADVERTISEMENT

ಚೀನಾದ ಸ್ಟೇಟ್‌ ಕೌನ್ಸಿಲ್‌ನ ನಿಯಮಗಳಿಗೆ ಅನುಗುಣವಾಗಿ ದಕ್ಷಿಣ ಟಿಬೆಟ್‌ನ 15 ಸ್ಥಳಗಳ ಹೆಸರು ಬದಲಾಯಿಸಲಾಗಿದೆ ಎಂದು ಗ್ಲೋಬಲ್‌ ಟೈಮ್ಸ್‌ ಹೇಳಿದೆ. ಸ್ಟೇಟ್‌ ಕೌನ್ಸಿಲ್ ಎಂದರೆ ಚೀನಾದ ಮುಖ್ಯ ಆಡಳಿತ ಪ್ರಾಧಿಕಾರವಾಗಿದೆ. ಹೆಸರು ಬದಲಿಸಲಾಗಿದೆ ಎಂದು‍ ಚೀನಾ ಹೇಳಿದ 15 ಸ್ಥಳಗಳಲ್ಲಿ ಎಂಟು ವಸತಿ ಪ್ರದೇಶಗಳು, ನಾಲ್ಕು ಪರ್ವತಗಳು, ಎರಡು ನದಿಗಳು ಮತ್ತು ಒಂದು ಕಣಿವೆ ಸೇರಿವೆ. 2017ರ ಏಪ್ರಿಲ್‌ನಲ್ಲಿಯೂ ಇಂತಹುದೇ ಪ್ರಯತ್ನಕ್ಕೆ ಚೀನಾ ಕೈ ಹಾಕಿತ್ತು. ಆರು ಸ್ಥಳಗಳ ಹೆಸರು ಬದಲಿಸಿತ್ತು. ಆದರೆ, ಭಾರತ ಅದನ್ನು ತಳ್ಳಿ ಹಾಕಿತ್ತು.

ಅರುಣಾಚಲ ಪ್ರದೇಶವು ಭಾರತದ ಭಾಗ ಎಂಬುದನ್ನು ಚೀನಾ ಎಂದೂ ಒಪ್ಪಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯವು 2020ರ ಫೆಬ್ರುವರಿಯಲ್ಲಿ ಹೇಳಿತ್ತು. ಚೀನಾದ ಸೈನಿಕರುಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರತದೊಳಕ್ಕೆ ನುಸುಳುವ ಪ್ರಯತ್ನವನ್ನು ಇತ್ತೀಚೆಗೆಮಾಡಿದ್ದರು. ಚೀನಾದೊಂದಿಗಿನ ಸಂಘರ್ಷವು ಈ ಎರಡು ರಾಜ್ಯಗಳಿಗೂ ವಿಸ್ತರಣೆ ಆಗಬಹುದು ಎಂಬ ಅನುಮಾನಕ್ಕೆ ಇದು ಕಾರಣವಾಗಿತ್ತು.

ಚೀನಾವು 2017ರ ಏಪ್ರಿಲ್‌ನಲ್ಲಿ ಇಂತಹುದೇ ಕ್ರಮಕ್ಕೆ ಮುಂದಾಗಿದ್ದಾಗ ಭಾರತ ಕಟುವಾದ ಪ್ರತಿಕ್ರಿಯೆ ನೀಡಿತ್ತು. ‘ಪಟ್ಟಣಗಳಿಗೆ ಹೊಸ ಹೆಸರುಗಳನ್ನು ಇರಿಸುವುದರಿಂದನೆರೆಯ ದೇಶದ ಪ್ರದೇಶದ ಮೇಲೆ ನಿಮ್ಮ ಅಕ್ರಮ ಹಕ್ಕು ಸಾಧನೆಯು ಸಕ್ರಮ ಅನಿಸಿಕೊಳ್ಳುವುದಿಲ್ಲ’ ಎಂದು ವಿದೇಶಾಂಗ ಸಚಿವಾಲಯವು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.