ನವದೆಹಲಿ: ಚೀನಾದಲ್ಲಿ ತಯಾರಿಸಲಾದ ಮತ್ತು ಮ್ಯಾನ್ಮಾರ್‌ಗೆ ಕಳ್ಳಸಾಗಣೆ ಮಾಡುತ್ತಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಈಚೆಗೆ ವಶಕ್ಕೆ ಪಡೆದ ಥಾಯ್ಲೆಂಡ್ ಸೇನೆಯಿಂದ ಭಾರತವು ಹೆಚ್ಚಿನ ಮಾಹಿತಿಯನ್ನು ಕೋರಿದೆ. ಈಶಾನ್ಯ ಭಾರತದ ಬಂಡುಕೋರ ಸಂಘಟನೆಗಳಿಗೆ ಈ ಶಸ್ತ್ರಾಸ್ತ್ರಗಳು ಪೂರೈಕೆಯಾಗುತ್ತಿದ್ದವೇ ಎಂಬುದನ್ನು ಪತ್ತೆ ಮಾಡಲು ಭಾರತ ಮುಂದಾಗಿದೆ.
ಥಾಯ್ಲೆಂಡ್–ಮ್ಯಾನ್ಮಾರ್ ಗಡಿಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದವರನ್ನು ಈಚೆಗೆ ಥಾಯ್ಲೆಂಡ್ ಸೈನಿಕರು ವಶಕ್ಕೆ ಪಡೆದಿದ್ದರು. ಥಾಯ್ಲೆಂಡ್‌ನ ಇಬ್ಬರು ಮತ್ತು ಮ್ಯಾನ್ಮಾರ್‌ನ ಇಬ್ಬರು ಪ್ರಜೆಗಳನ್ನು ಸೇನೆಯು ಬಂಧಿಸಿತ್ತು. ಬಂಧಿತರಿಂದ ಭಾರಿ ಪ್ರಮಾಣದಲ್ಲಿ ಎ.ಕೆ.47 ರೈಫಲ್‌ಗಳು, ಸ್ವಯಂಚಾಲಿತ ಮೆಷಿನ್‌ಗನ್‌ಗಳು, ಟ್ಯಾಂಕ್ ನಿರೋಧಕ ಮೈನ್‌ಗಳು, ಗ್ರೆನೇಡ್‌ಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಶಸ್ತ್ರಾಸ್ತ್ರಗಳನ್ನು ಚೀನಾದಲ್ಲಿ ತಯಾರಿಸಲಾಗಿದೆ ಎಂದು ಥಾಯ್ ಸೇನೆ ಹೇಳಿತ್ತು.
ಈ ಕಳ್ಳಸಾಗಣೆ ಪ್ರಕರಣದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಿ ಎಂದು ಭಾರತ ಸರ್ಕಾರವು ಥಾಯ್ಲೆಂಡ್ ಸರ್ಕಾರ ಮತ್ತು ಮ್ಯಾನ್ಮಾರ್ ಸರ್ಕಾರಕ್ಕೆ ಪತ್ರ ಬರೆದಿದೆ. ಭಾರತದ ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಈ ಬಗ್ಗೆ ಈಗಾಗಲೇ ಎರಡೂ ದೇಶಗಳ ಭದ್ರತಾ ಅಧಿಕಾರಿಗಳ ಜತೆ ಮಾತನಾಡಿದ್ದಾರೆ ಎಂದು ಮೂಲಗಳು ಹೇಳಿವೆ.
‘ಮ್ಯಾನ್ಮಾರ್‌ನ ಬಂಡುಕೋರ ಸಂಘಟನೆಗಳಾದ ಅರಾಕನ್ ಆರ್ಮಿ ಅಥವಾ ಕಚಿನ್ ಇಂಡಿಪೆಂಡೆನ್ಸ್ ಆರ್ಮಿ ಈ ಶಸ್ತ್ರಾಸ್ತ್ರಗಳನ್ನು ಖರೀದಿಸಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆ ಹೇಳುತ್ತದೆ’ ಎಂದು ಮ್ಯಾನ್ಮಾರ್ ಹೇಳಿದೆ. ಆದರೆ, ಮತ್ತಷ್ಟು ವಿವರಗಳನ್ನು ನೀಡುವಂತೆ ಭಾರತವು ಕೇಳಿಕೊಂಡಿದೆ.
‘ಶಸ್ತ್ರಾಸ್ತ್ರಗಳನ್ನು ಎಲ್ಲಿ ತಯಾರಿಸಲಾಗಿದೆ, ಅವುಗಳ ಕಳ್ಳಸಾಗಣೆಗೆ ಬಳಸಿದ ಮಾರ್ಗಗಳು ಮತ್ತುಮ್ಯಾನ್ಮಾರ್‌ನಲ್ಲಿ ಯಾವ ಜಾಗಕ್ಕೆ ಈ ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗುತ್ತಿತ್ತು ಎಂಬುದರ ವಿವರ ನೀಡಿ ಎಂದು ಸರ್ಕಾರವು ಕೇಳಿಕೊಂಡಿದೆ’ ಎಂದು ಮೂಲಗಳು ಹೇಳಿವೆ.
‘ಎಚ್ಚರಿಕೆ ಅಗತ್ಯ’: ‘ಆಗ್ನೇಯ ಏಷ್ಯಾದಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಬಹುತೇಕ ನಿಂತಿತ್ತು. ಈಗ ಮತ್ತೆ ಅದು ಚಾಲನೆಗೆ ಬಂದಿದೆ. ಆದರೆ ಈಗ ಅದು ನಮ್ಮ ನೆರೆ ರಾಷ್ಟ್ರಕ್ಕೆ ಬಂದಿದೆ. ಇದು ಅತ್ಯಂತ ಆತಂಕಕಾರಿ ವಿಷಯ. ಹೀಗಾಗಿ ಇನ್ನು ಮುಂದೆ ನಾವು ಈ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು ಎಂದು ಭದ್ರತಾ ತಜ್ಞರು ಹೇಳಿದ್ದಾರೆ’ ಎಂದು ಮೂಲಗಳು ಹೇಳಿವೆ.
ಶಸ್ತ್ರಾಸ್ತ್ರ ತರಬೇತಿ: ಭಾರತ ಕಳವಳ
ಈಶಾನ್ಯ ಭಾರತ ರಾಜ್ಯಗಳ ಹಲವು ಬಂಡುಕೋರ ಸಂಘಟನೆಗಳಿಗೆ ಮ್ಯಾನ್ಮಾರ್‌ನ ಬಂಡುಕೋರ ಸಂಘಟನೆಗಳು ಈ ಹಿಂದೆ ಶಸ್ತ್ರಾಸ್ತ್ರ ತರಬೇತಿ ನೀಡಿದ್ದವು. ಶಸ್ತ್ರಾಸ್ತ್ರಗಳ ಪೂರೈಕೆಯನ್ನೂ ಮಾಡಿದ್ದವು. ಹೀಗಾಗಿ ಈಗ ವಶಕ್ಕೆ ಪಡೆಯಲಾಗಿರುವ ಶಸ್ತ್ರಾಸ್ತ್ರಗಳನ್ನು ಈಶಾನ್ಯ ಭಾರತಕ್ಕೆ ಸಾಗಿಸುವ ಉದ್ದೇಶ ಇತ್ತೇ ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ಭಾರತದ ಭದ್ರತಾ ಸಂಸ್ಥೆಗಳು ಹೇಳಿವೆ ಎಂದು ಮೂಲಗಳು ಹೇಳಿವೆ.
‘ಭಾರತದ ಈಶಾನ್ಯ ರಾಜ್ಯಗಳ ಬಂಡುಕೋರ ಸಂಘಟನೆಗಳಿಗೆ ಚೀನಾ ಈ ಹಿಂದೆ ಬೆಂಬಲ ಮತ್ತು ನೆರವು ನೀಡಿತ್ತು. ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂನ ಬಂಡುಕೋರ ಸಂಘಟನೆಗಳು ಸರ್ಕಾರದ ಜತೆ ಶಾಂತಿ ಮಾತುಕತೆ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಸಂಘರ್ಷವನ್ನು ಸೃಷ್ಟಿಸಲು ಚೀನಾ ಪ್ರಯತ್ನಿಸುತ್ತಿದೆಯೇ ಎಂಬುದು ಭದ್ರತಾ ಸಂಸ್ಥೆಗಳ ಮುಂದೆ ಈಗ ಇರುವ ಪ್ರಶ್ನೆ’ ಎಂದು ಮೂಲಗಳು ವಿವರಿಸಿವೆ.
ಚೀನಾದ ಗುಪ್ತಚರ ಸಂಸ್ಥೆಯು ಈ ಬಂಡುಕೋರ ಸಂಘಟನೆಗಳ ಜತೆ ಈ ಹಿಂದೆ ಸಂಪರ್ಕದಲ್ಲಿ ಇತ್ತು ಎಂಬುದು ಹಲವು ಬಾರಿ ಸಾಬೀತಾಗಿದೆ. 2004ರಲ್ಲಿ ಅಸ್ಸಾಂನ ಉಲ್ಫಾ ಉಗ್ರರಿಗೆ ಚೀನಾದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆ ಆಗುತ್ತಿತ್ತು. ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನಲ್ಲೇ ಅದನ್ನು ತಡೆದು, ವಶಕ್ಕೆ ಪಡೆಯಲಾಗಿತ್ತು. ಈಗ ಮತ್ತೆ ಇಂತಹ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದರ ಬಗ್ಗೆ ಭದ್ರತಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.