ADVERTISEMENT

ಚೋಕ್ಸಿ ಗಡೀಪಾರು ಅಸಾಧ್ಯ: ಕೇಂದ್ರದ ನಿರ್ಲಕ್ಷ್ಯಕ್ಕೆ ಕಾಂಗ್ರೆಸ್‌ ಆಕ್ಷೇಪ

ಪಿಟಿಐ
Published 16 ಏಪ್ರಿಲ್ 2023, 13:49 IST
Last Updated 16 ಏಪ್ರಿಲ್ 2023, 13:49 IST
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ   

ನವದೆಹಲಿ (ಪಿಟಿಐ): ದೇಶ ಭ್ರಷ್ಟ, ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿ ಅವರನ್ನು ಕೆರಿಬಿಯನ್‌ ದ್ವೀಪ ರಾಷ್ಟ್ರಗಳಿಂದ ಗಡೀಪಾರು ಮಾಡಲು ಸಾಧ್ಯವಿಲ್ಲ ಎಂದು ಆಂಟೀಗ್ವಾ ಮತ್ತು ಬಾರ್ಬುಡಾ ದ್ವೀಪದ ನ್ಯಾಯಾಲಯವೊಂದು ಹೇಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌, ಇದು ಕೇಂದ್ರ ಸರ್ಕಾರದ ‘ನಿರ್ಲಕ್ಷ್ಯ’ದ ಫಲ ಎಂದು ಹೇಳಿದೆ.

‘ಚೋಕ್ಸಿ ಅವರನ್ನು ದೇಶಕ್ಕೆ ಕರೆತರುವಲ್ಲಿ ಕೇಂದ್ರ ಸರ್ಕಾರವು ‘ಪದೇ ಪದೇ ನಿರ್ಲಕ್ಷ್ಯ ಧೋರಣೆ’ ಅನುಸರಿಸುತ್ತಿದೆ. ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ಮೋದಿ ಅವರ ‘ಮೆಹುಲ್‌ ಭಾಯಿ’ ಅವರು ನಮ್ಮ ಬ್ಯಾಂಕುಗಳಿಂದ ಲೂಟಿ ಮಾಡಿದ ಹಣದಲ್ಲಿ ಹಲವು ವರ್ಷಗಳಿಂದ ವಿದೇಶಗಳಲ್ಲಿ ಸುಖಮಯ ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ಚೋಕ್ಸಿ ಅವರ ಮೇಲಿದ್ದ ರೆಡ್‌ ಕಾರ್ನರ್‌ ನೋಟಿಸ್‌ ಅನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಈಗ ನ್ಯಾಯಾಲಯದಿಂದ ಈ ರೀತಿಯ ಆದೇಶ ಬಂದಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ 13 ಸಾವಿರ ಕೋಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಚೋಕ್ಸಿ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.