
ಹೈದರಾಬಾದ್: ರಾಜ್ಯದ ಖಜಾನೆಗೆ ₹300 ಕೋಟಿಗೂ ಹೆಚ್ಚಿನ ನಷ್ಟ ಉಂಟು ಮಾಡಿದ ‘ಕೌಶಲ ಅಭಿವೃದ್ಧಿ ಹಗರಣ’ಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಇತರೆ ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮುಕ್ತಾಯಗೊಳಿಸಲು ಸಿಐಡಿ ಸಲ್ಲಿಸಿದ್ದ ಮನವಿಯನ್ನು ವಿಜಯವಾಡದ ‘ಎಸಿಬಿ’ ಕೋರ್ಟ್ ಮಂಗಳವಾರ ಅನುಮೋದಿಸಿದೆ.
ವೈಎಸ್‌ಆರ್‌ಸಿಪಿ ಅವಧಿಯಲ್ಲಿ ವಿರೋಧ ಪಕ್ಷದ ಮುಖಂಡರಾಗಿದ್ದ ನಾಯ್ಡು ಅವರನ್ನು ‘ಕೌಶಲ ಅಭಿವೃದ್ಧಿ ಹಗರಣದಲ್ಲಿ ಆರೋಪಿಯನ್ನಾಗಿ ಮಾಡಿ, 2023ರ ಸೆಪ್ಟೆಂಬರ್ 9ರಂದು ಬಂಧಿಸಲಾಗಿತ್ತು. 50 ದಿನ ಜೈಲಿನಲ್ಲಿ ಕಳೆದ ಅವರು 2023ರ ಅಕ್ಟೋಬರ್ 31ರಂದು ಜಾಮೀನು ಪಡೆದು ಹೊರಬಂದಿದ್ದರು.
ಒಟ್ಟು ₹3,300 ಕೋಟಿ ಮೊತ್ತದಲ್ಲಿ ಕ್ಲಸ್ಟರ್ ಮಟ್ಟದ ಶ್ರೇಷ್ಠತಾ ಕೇಂದ್ರಗಳನ್ನು ತೆರೆಯುವ (ಸಿಒಇಎಸ್) ಯೋಜನೆ ಇದಾಗಿತ್ತು. ಇದರಲ್ಲಿ ನಾಯ್ಡು ಮತ್ತು ಸಹ ಆರೋಪಿಗಳು ಸೇರಿಕೊಂಡು ₹300 ಕೋಟಿಗೂ ಹೆಚ್ಚಿನ ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಸಿಐಡಿ ಸೋಮವಾರ ಎಸಿಬಿ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಇದು ‘ತಪ್ಪು ಗ್ರಹಿಕೆ’ ಪ್ರಕರಣವಾಗಿದ್ದು, ಮುಕ್ತಾಯಗೊಳಿಸಲು ಅನುಮತಿ ನೀಡಬೇಕಾಗಿ ಕೋರಿತ್ತು.
‘ನಾಯ್ದು ಅವರು ತನಿಖಾ ಸಂಸ್ಥೆಗಳ ಪ್ರಭಾವ ಬೀರಿದ್ದಾರೆ ಎಂದು ವೈಎಸ್‌ಆರ್‌ಸಿಪಿ ಆರೋಪಿಸಿದೆ. ಪಕ್ಷವು ನಾಯ್ಡು ವಿರುದ್ಧ ಕಾನೂನು ಹೋರಾಟ ಮುಂದುವರಿಸಲಿದೆ ಎಂದು ಮಾಜಿ ಸಚಿವ ಕೆ. ಕನ್ನಬಾಬು ಹೇಳಿದ್ದಾರೆ.
‘ಕೌಶಲ ಅಭಿವೃದ್ಧಿ ಹಗರಣ’ದ ತನಿಖೆಯನ್ನು ಮುಕ್ತಾಯಗೊಳಿಸುವುದು ಅಸಾಂವಿಧಾನಿಕ, ಅಪಾಯಕಾರಿ’ ಎಂದು ಸಾಕೆ ಸೈಲಾಜನಾಥ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.