ಸುಪ್ರೀಂ ಕೋರ್ಟ್
ನವದೆಹಲಿ: ‘ಪೊಲೀಸ್ ಠಾಣೆಗೆ ದೂರು ನೀಡಲು ಬರುವ ಯಾವುದೇ ವ್ಯಕ್ತಿಯನ್ನು ಅಪರಾಧಿಯಂತೆ ನಡೆಸಿಕೊಳ್ಳಬಾರದು. ಅವರನ್ನು ಘನತೆಯಿಂದ ನಡೆಸಿಕೊಳ್ಳಬೇಕು. ಇದು ಸಂವಿಧಾನದ 21ನೇ ವಿಧಿಯು ನೀಡಿರುವ ಅವರ ಮೂಲಭೂತ ಹಕ್ಕು ಕೂಡ ಆಗಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೂರುದಾರರೊಬ್ಬರಿಗೆ ಅಸಭ್ಯ ಭಾಷೆಯನ್ನು ಬಳಸಿದ್ದಕ್ಕಾಗಿ ₹2 ಲಕ್ಷ ಪರಿಹಾರ ಪಾವತಿಸುವಂತೆ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರಿಗೆ ನೀಡಿರುವ ದಂಡದ ಶಿಕ್ಷೆಯನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು, ‘ಈ ಪ್ರಕರಣದಲ್ಲಿನ ಅಂಶಗಳು ಅತ್ಯಂತ ಆಘಾತಕಾರಿಯಾಗಿವೆ’ ಎಂದು ಹೇಳಿದೆ.
ತಮಿಳುನಾಡಿನ ವಿರ್ತುನಗರ ಜಿಲ್ಲೆಯ ಶ್ರೀವಿಲ್ಲಿಪುತ್ತೂರ್ ಟೌನ್ ಪೊಲೀಸ್ ಠಾಣೆಯ (ಕ್ರೈಮ್) ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದ ಮೇಲ್ಮನವಿದಾರ ಪಾವುಲ್ ಯೇಸುದಾಸನ್, ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದು ಮಾತ್ರವಲ್ಲ, ದೂರುದಾರರ ತಾಯಿಯೊಂದಿಗೆ ಮಾತನಾಡುವಾಗ ಬಹಳ ಆಕ್ಷೇಪಾರ್ಹ ಮತ್ತು ನಿಂದನೀಯ ಭಾಷೆಯನ್ನು ಬಳಸಿದ್ದಾರೆ’ ಎಂದು ನ್ಯಾಯಪೀಠ ಹೇಳಿದೆ.
'ಅಪರಾಧದ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಬರುವವರನ್ನು ಘನತೆಯಿಂದ ನಡೆಸಿಕೊಳ್ಳಬೇಕು. ಇದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ. ಅಪರಾಧದ ಬಗ್ಗೆ ದೂರು ನೀಡಲು ಬರುವ ನಾಗರಿಕನನ್ನು ಅಪರಾಧಿಯಂತೆ ಪರಿಗಣಿಸಬಾರದು’ ಎಂದು ಪೀಠವು ಹೇಳಿದ್ದು, ಮೇಲ್ಮನವಿದಾರರ ಅರ್ಜಿಯನ್ನು ವಜಾಗೊಳಿಸಿತು.
ಮಾನವ ಹಕ್ಕು ಉಲ್ಲಂಘಿಸಿರುವ ಪೊಲೀಸ್ ಇನ್ಸ್‌ಪೆಕ್ಟರ್‌ನಿಂದ ₹2 ಲಕ್ಷ ವಸೂಲಿ ಮಾಡಿ, ದೂರುದಾರರಿಗೆ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಮಾನವ ಹಕ್ಕು ಆಯೋಗ ನಿರ್ದೇಶನ ನೀಡಿತ್ತು. ಇದರಲ್ಲಿ ಮಧ್ಯಪ್ರವೇಶ ಮಾಡಲು ಮದ್ರಾಸ್ ಹೈಕೋರ್ಟ್ ಕೂಡ ನಿರಾಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.