ನವದೆಹಲಿ: ‘ಇಂತಹ ಘಟನೆಗಳಿಂದ ನೀವು ವಿಚಲಿತರಾಗಬೇಡಿ. ನಾನು ವಿಚಲಿತಗೊಳ್ಳುವುದಿಲ್ಲ. ಇದ್ಯಾವುದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ....’ ಸುಪ್ರೀಂ ಕೋರ್ಟ್‌ನಲ್ಲಿ ವಕೀಲನೊಬ್ಬ ತಮ್ಮ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಬಗ್ಗೆ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ನೀಡಿದ ಪ್ರತಿಕ್ರಿಯೆ ಇದು.
ಇಂದು(ಸೋಮವಾರ) ಬೆಳಿಗ್ಗೆ ಈ ಘಟನೆ ನಡೆದಿದ್ದು, ಸಿಜೆಐ ನೇತೃತ್ವದ ಪೀಠವು ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ವೇಳೆ ಪೀಠದ ಮುಂದೆ ಬಂದ ವಕೀಲ ತನ್ನ ಕಾಲಿಂದ ಶೂ ಕಳಚಿ ಗವಾಯಿ ಅವರನ್ನು ಗುರಿಯಾಗಿಸಿ ಎಸೆಯಲು ಯತ್ನಿಸಿದ್ದಾನೆ. ತಕ್ಷಣ ಅಲ್ಲಿದ್ದ ಭದ್ರತಾ ಸಿಬ್ಬಂದಿ ವಕೀಲನನ್ನು ತಡೆದು ಹೊರಗೆ ಕಳುಹಿಸಿದ್ದಾರೆ.
ಕೋರ್ಟ್ ಆವರಣದಿಂದ ಹೊರ ನಡೆಯುವ ವೇಳೆ, ಸನಾತನ ಧರ್ಮಕ್ಕೆ ಅಪಮಾನ ಸಹಿಸುವುದಿಲ್ಲ ಎಂದು ಆತ ಕೂಗಿದ್ದಾನೆ ಎಂದು ವರದಿಯಾಗಿದೆ.
ಇದಾವುದರಿಂದಲೂ ವಿಚಲಿತರಾಗದೇ ತಮ್ಮ ಆಸನದಲ್ಲಿ ಕುಳಿತಿದ್ದ ಗವಾಯಿ ಅವರು, ವಾದ ಮುಂದುವರಿಸುವಂತೆ ವಕೀಲರಿಗೆ ತಿಳಿಸಿದ್ದಾರೆ.
ಖಜುರಾಹೊದಲ್ಲಿ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ವಿಗ್ರಹದ ಪುನಃಸ್ಥಾಪನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಜೆಐ ಗವಾಯಿ ಅವರು ನೀಡಿದ ಹೇಳಿಕೆಗಳು ಈ ಘಟನೆಗೆ ಕಾರಣವಾಗಿರಬಹುದು ಎಂದು ಬಾರ್ ಆ್ಯಂಡ್ ಬೆಂಚ್ ವರದಿ ಮಾಡಿದೆ.
ಈ ಪ್ರಕರಣದಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ್ದ ಸಿಜೆಐ ಗವಾಯಿ ಅವರು, ‘ಹೋಗಿ ದೇವರನ್ನೇ ಏನಾದರೂ ಮಾಡಲು ಕೇಳಿ’ ಎಂದಿದ್ದರು. ಗವಾಯಿ ಅವರ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ನಂತರ ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಜೆಐ, ‘ನಾನು ಎಲ್ಲಾ ಧರ್ಮವನ್ನು ಗೌರವಿಸುತ್ತೇನೆ. ಸಾಮಾಜಿಕ ಮಾಧ್ಯಮದಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಚಿತ್ರಿಸಲಾಗಿದೆ’ ಎಂದಿದ್ದರು.
ಏನತ್ಮಧ್ಯೆ, ಈ ಪ್ರಕರಣವನ್ನು ಖಂಡಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಪ್ರತಿಯೊಂದು ಘಟನೆಗಳಿಗೂ ಸಾಮಾಜಿಕ ಮಾಧ್ಯಮದಲ್ಲಿ ಅತಿರೇಕದ ಪ್ರತಿಕ್ರಿಯೆಗಳು ಬರುತ್ತಿವೆ’ ಎಂದಿದ್ದಾರೆ.
ಇನ್ನು, ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ನ್ಯಾಯಶಾಸ್ತ್ರಜ್ಞೆ ಇಂದಿರಾ ಜೈಸಿಂಗ್, ಘಟನೆ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.
‘ವಕೀಲರ ಹೆಸರನ್ನು ಬಹಿರಂಗಪಡಿಸಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸೈದ್ಧಾಂತಿಕ ದಾಳಿಗಳನ್ನು ನ್ಯಾಯಾಲಯವು ಸಹಿಸುವುದಿಲ್ಲ ಎಂಬ ಒಗ್ಗಟ್ಟಿನ ಪತ್ರಿಕಾ ಹೇಳಿಕೆಯ ಮೂಲಕ ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಾಧೀಶರು ಈ ಘಟನೆಯನ್ನು ಖಂಡಿಸಬೇಕು’ ಎಂದು ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.