ADVERTISEMENT

ಸಿಜೆಐ ರಾಜೀನಾಮೆಗೆ ಷಡ್ಯಂತ್ರ ಪ್ರಕರಣದ ವಿಚಾರಣೆ: ‘ಬೇರು ಸಿಗುವವರೆಗೆ ತನಿಖೆ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 20:23 IST
Last Updated 24 ಏಪ್ರಿಲ್ 2019, 20:23 IST
   

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರನ್ನು ‘ಸುಳ್ಳು’ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಸಲು ಸುಪ್ರೀಂ ಕೋರ್ಟ್‌ನ ‘ಅತೃಪ್ತ ಉದ್ಯೋಗಿಗಳ’ ಗುಂಪು ಪ್ರಯತ್ನಿಸುತ್ತಿದೆ ಎಂದು ವಕೀಲರೊಬ್ಬರು ನೀಡಿರುವ ಹೇಳಿಕೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಗುವುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ಹೀಗೆ ಸಿಲುಕಿಸಲು ನಮ್ಮ ವ್ಯವಸ್ಥೆಯಲ್ಲಿ ಯಾವುದೇ ಅವಕಾಶ ಇಲ್ಲ. ಈ ವಿಚಾರದ ಬೇರು ಎಲ್ಲಿದೆ ಎಂಬುದನ್ನು ಹುಡುಕಲಾಗುವುದು. ಸಿಲುಕಿಸಲು ಯತ್ನಿಸುತ್ತಿರುವವರು ಯಾರು? ಇದರ ಕೊನೆ ಸಿಗುವವರೆಗೆ ನಾವು ತನಿಖೆ ನಡೆಸುತ್ತಲೇ ಇರುತ್ತೇವೆ’ ಎಂದು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ ಎಂದು ಕಳೆದ ಶನಿವಾರ ವರದಿಯಾಗಿತ್ತು. ಅದರ ಬಳಿಕ, ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ.

ADVERTISEMENT

ಗೊಗೊಯಿ ಅವರು ರಾಜೀನಾಮೆ ನೀಡುವಂತೆ ಮಾಡಲು ಗುಂಪೊಂದು ಯತ್ನಿಸುತ್ತಿದೆ ಎಂದು ವಕೀಲ ಉತ್ಸವ್‌ ಬೈನ್ಸ್‌ ಎಂಬವರು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈ ಪ್ರಮಾಣಪತ್ರವನ್ನು ನ್ಯಾಯಪೀಠವು ಬುಧವಾರ ಪರಿಶೀಲನೆ ನಡೆಸಿದೆ. ಪ್ರಕರಣದ ಮುಂದಿನ ತನಿಖೆಯ ಬಗ್ಗೆ ಚರ್ಚಿಸಲು ಸಿಬಿಐ ನಿರ್ದೇಶಕ, ಗುಪ್ತಚರ ಘಟಕದ ಮುಖ್ಯಸ್ಥ ಮತ್ತು ದೆಹಲಿ ಪೊಲೀಸ್‌ ಆಯುಕ್ತರು ಹಾಜರಾಗಬೇಕು ಎಂದು ಪೀಠವು ನಿರ್ದೇಶನ ನೀಡಿದೆ.

ತಮ್ಮ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾದ ವಿಚಾರಗಳನ್ನು ಸಮರ್ಥಿಸುವ ಇನ್ನಷ್ಟು ದಾಖಲೆಗಳನ್ನು ಗುರುವಾರ ಸಲ್ಲಿಸಬೇಕು ಎಂದು ಬೈನ್ಸ್‌ ಅವರಿಗೆ ಪೀಠ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಗುರುವಾರ ನಡೆಯಲಿದೆ.

ಬೈನ್ಸ್‌ ಅವರು ಕೆಲವು ದಾಖಲೆಗಳನ್ನು ಈಗಾಗಲೇ ಸಲ್ಲಿಸಿದ್ದಾರೆ. ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳು ಮತ್ತು ಇತರ ದಾಖಲೆಗಳು ಅದರಲ್ಲಿ ಸೇರಿವೆ.

ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ನೇತೃತ್ವದಲ್ಲಿ ನಡೆಯುತ್ತಿರುವ ಆಂತರಿಕ ತನಿಖೆಯನ್ನು ಈ ವಿಚಾರಣೆಯು ಯಾವುದೇ ರೀತಿಯಲ್ಲಿಯೂ ಪ್ರಭಾವಿಸುವುದಿಲ್ಲ ಎಂದೂ ಪೀಠವು ಸ್ಪಷ್ಟಪಡಿಸಿದೆ.

**

ಯಾರನ್ನಾದರೂ ಸಿಲುಕಿಸುವ ಗುಂಪೊಂದು ಇದ್ದರೆ ಅದರಿಂದಾಗಿ ಸುಪ್ರೀಂ ಕೋರ್ಟ್‌ ಮೇಲಿನ ನಂಬಿಕೆಯನ್ನು ದೇಶ ಕಳೆದುಕೊಳ್ಳುತ್ತದೆ. ಈ ಸಂಸ್ಥೆಯು ನಮಗೆಲ್ಲರಿಗಿಂತಲೂ ದೊಡ್ಡದು
- ಸುಪ್ರೀಂ ಕೋರ್ಟ್‌ ನ್ಯಾಯಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.