ADVERTISEMENT

ಲಖಿಂಪುರ ಖೇರಿ | ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸುಪ್ರೀಂ ತೀವ್ರ ಅಸಮಾಧಾನ

ದೇಶದ ಬೇರೆ ಆರೋಪಿಗಳಿಗೂ ಈ ಪ್ರಕರಣದಂತೆಯೇ ಆಮಂತ್ರಣ ಕೊಟ್ಟು ವಿಚಾರಣೆಗೆ ಕರೆಯುವಿರಾ ಎಂದು ಪ್ರಶ್ನೆ ಮಾಡಿದ ನ್ಯಾಯಾಲಯ

ಪಿಟಿಐ
Published 8 ಅಕ್ಟೋಬರ್ 2021, 16:04 IST
Last Updated 8 ಅಕ್ಟೋಬರ್ 2021, 16:04 IST
   

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಎಂಬಲ್ಲಿ ನಡೆದ ದುರ್ಘಟನೆಯ ತನಿಖೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಕೈಗೊಂಡ ಕ್ರಮಗಳು ತೃಪ್ತಿಕರವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಇಲ್ಲಿಯ ವರೆಗೆ ಯಾಕೆ ಬಂಧಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಪ್ರಶ್ನೆ ಮಾಡಿದೆ.

’ಇದು ಪೀಠದ ಅಭಿಪ್ರಾಯ. ಜವಾಬ್ದಾರಿಯುತ ಸರ್ಕಾರ, ಪೊಲೀಸ್ ಅಧಿಕಾರಿಗಳು ಮತ್ತು ವ್ಯವಸ್ಥೆಯೊಂದು ಅಸ್ತಿತ್ವದಲ್ಲಿದೆ ಎಂದು ನಾವು ಭಾವಿಸುತ್ತೇವೆ. ಗುಂಡಿನ ಗಾಯದ ಗಂಭೀರ ಆರೋಪವಿದ್ದಾಗ, ದೇಶದ ಇತರ ಆರೋಪಿಗಳಿಗೂ ಹೀಗೇ ಆಮಂತ್ರಣ ಕಳುಹಿಸಿ ವಿಚಾರಣೆಗೆ ಕರೆಯುತ್ತೀರಾ?’ ಎಂದು ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ತ್ರಿಸದಸ್ಯ ಪೀಠದ ಮುಖ್ಯಸ್ಥರಾದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಪ್ರಶ್ನೆ ಕೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ, ‘ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ವಿಚಾರಣೆಗೆ ಕರೆಯಲಾಗಿದೆ,’ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸಾಳ್ವೆ ಉತ್ತರ ಕೇಳಿ ಕೆಂಡಾಮಂಡಲಗೊಂಡ ನ್ಯಾಯಾದೀಶರು, ‘ ದೇಶದ ಬೇರೆ ಆರೋಪಿಗಳಿಗೂ ಹೀಗೇ ವಿಚಾರಣೆಗೆ ಬರುವಂತೆ ಆಮಂತ್ರಣ ನೀಡುವಿರಾ’ ಎಂದು ಕೇಳಿದರು.

ADVERTISEMENT

ಇದಕ್ಕೆ ಉತ್ತರಿಸಿದ ಸಾಳ್ವೆ, ‘‍ನಾನು ಅವರನ್ನು (ಪೋಲಿಸ್) ಕೇಳಿದೆ. ಮೃತಪಟ್ಟವರ ದೇಹದಲ್ಲಿ ಗುಂಡು ಬಿದ್ದ ಯಾವುದೇ ಗುರುತುಗಳು ಕಂಡು ಬಂದಿಲ್ಲಎಂದು ಅವರು ಹೇಳಿದರು. ಅದಕ್ಕಾಗಿಯೇ,ಆಶಿಶ್‌ಗೆ ವಿಚಾರಣೆ ಬರುವಂತೆ ಸೆಕ್ಷನ್ 161 ಸಿಆರ್‌ಪಿಸಿ ಅಡಿಯಲ್ಲಿ ಸೂಚನೆ ನೀಡಿರುವುದಾಗಿ ಹೇಳಿದರು. ಗುಂಡೇಟಿನ ಗಾಯಗಳಿದ್ದಿದ್ದರೆ ಪರಿಸ್ಥಿತಿ ಬೇರೆಯದ್ದೇ ಆಗಿರುತ್ತಿತ್ತು ಎಂದೂ ಪೊಲೀಸರು ಹೇಳಿದರು,‘ ಎಂದು ನ್ಯಾಯಪೀಠಕ್ಕೆ ಸಾಳ್ವೆ ತಿಳಿಸಿದರು.

‘ಆದರೆ, ಕಾರನ್ನು ಓಡಿಸಿದ ರೀತಿಯನ್ನು ಗಮನಿಸಿದರೆ ಅದು ಐಪಿಸಿ 302ರ ಅಡಿಯ (ಕೊಲೆ) ಆರೋಪವಾಗಿರುವುದು ನಿಜ ಎಂದು ತೋರುತ್ತದೆ. ನಮ್ಮ ಮುಂದಿರುವ ಸಾಕ್ಷ್ಯಗಳು ಬಹಳ ಪ್ರಬಲವಾಗಿವೆ. ಸಾಕ್ಷ್ಯಗಳು ಪ್ರಬಲವಾಗಿದ್ದರೆ, ಅದು 302 ಪ್ರಕರಣವೇ ಆಗುತ್ತದೆ,’ ಎಂದು ಸಾಳ್ವೆ ಹೇಳಿದರು.

‘ಒಂದು ವಿಷಯ ತುಂಬಾ ಸ್ಪಷ್ಟವಾಗಿದೆ... ಯುವಕನ ವಿರುದ್ಧದ ಆರೋಪಗಳು ಸಮಸ್ಯಾತ್ಮಕವಾಗಿ ಕಾಣುತ್ತಿವೆ. ನಾವು ಆತನಿಗೆ ನೋಟಿಸ್ ನೀಡಿದ್ದೇವೆ. ಆತ ಸಮಯ ಕೇಳಿದ್ದಾನೆ. ನಾಳೆ ಬೆಳಿಗ್ಗೆ 11 ಗಂಟೆಗೆ ಬರಲು ನಾವು ಸೂಚಿಸಿದ್ದೇವೆ. ಬಾರದಿದ್ದರೆ, ಕಾನೂನಿನ ಕಾಠಿಣ್ಯತೆ ಪ್ರದರ್ಶನವಾಗಲಿದೆ,’ ಎಂದು ಸಾಳ್ವೆ ನ್ಯಾಯಪೀಠಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.