ADVERTISEMENT

ಬಿಹಾರ: 6ನೇ ತರಗತಿ ವಿದ್ಯಾರ್ಥಿ ಅಪಹರಣ, ₹40 ಲಕ್ಷ ಬೇಡಿಕೆ

ಐಎಎನ್ಎಸ್
Published 17 ಮಾರ್ಚ್ 2023, 16:50 IST
Last Updated 17 ಮಾರ್ಚ್ 2023, 16:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಬಿಹಾರದ 6ನೇ ತರಗತಿ ವಿದ್ಯಾರ್ಥಿಯನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದು, ಬಿಡುಗಡೆಗಾಗಿ ₹40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರಿ ಶಿಕ್ಷಕಿಯೊಬ್ಬರ ಪುತ್ರನಾದ ತುಷಾರ್ ಕುಮಾರ್‌ನನ್ನು ಅಪಹರಿಸಿದ ಅಪರಿಚಿತರು, ವಿದ್ಯಾರ್ಥಿಯ ಮೊಬೈಲ್ ಫೋನ್ ಬಳಸಿ, ವಾಟ್ಸಾಪ್‌ನ ಸಂದೇಶದಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ನಂತರ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ ಎಂದು ಬಿಹ್ತಾ ಪೊಲೀಸ್ ಅಧಿಕಾರಿ ಸನೋವರ್ ಖಾನ್ ಹೇಳಿದ್ದಾರೆ.

‘ನನ್ನ ಮಗ ಕೋಚಿಂಗ್ ಸೆಂಟರ್‌ನಿಂದ ಮನೆಗೆ ಮರಳಿದ್ದ. ನಂತರ ಕೆಲಸದ ನಿಮಿತ್ತ ಮಾರುಕಟ್ಟೆಗೆ ಹೋಗಿದ್ದ. ಆದರೆ ಮನೆಗೆ ಹಿಂತಿರುಗದಿದ್ದಾಗ ನಾವು ಅವನನ್ನು ಹುಡುಕಲು ಪ್ರಾರಂಭಿಸಿದೆವು. ಘಟನೆಯ ಬಗ್ಗೆ ಬಿಹ್ತಾ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ’ಎಂದು ಸಂತ್ರಸ್ತನ ತಂದೆ ರಾಜ್ ಕಿಶೋರ್ ಪಂಡಿತ್ ತಿಳಿಸಿದ್ದಾರೆ.

ADVERTISEMENT

ಘಟನೆ ಬಗ್ಗೆ ಪೊಲೀಸರಿಗೆ ತಿಳಿಸದಂತೆ ಬೆದರಿಕೆ ಹಾಕಿರುವ ಅಪಹರಣಕಾರರು, ಕುಟುಂಬದ ಚಟುವಟಿಕೆಗಳನ್ನು ಗಮನಿಸುತ್ತಿರುವುದಾಗಿ ಹೇಳಿದ್ದಾರೆ. ತುಷಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಹಣ ನೀಡದಿದ್ದರೆ ಕೊಲ್ಲುತ್ತೇವೆ ಎಂದೂ ಹೆದರಿಸಿದ್ದಾರೆ ಎಂದು ಕಿಶೋರ್ ಪಂಡಿತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.