ನವದೆಹಲಿ: ‘ಇಂಡಿಯಾ’ ಒಕ್ಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ವಿರುದ್ಧ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದನ್ನು ಖಂಡಿಸಿದ 18 ನ್ಯಾಯಮೂರ್ತಿಗಳ ನಡೆಯ ವಿರುದ್ಧ 56 ಮಂದಿ ನಿವೃತ್ತ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನ್ಯಾಯಾಂಗದ ಸ್ವಾತಂತ್ರ್ಯದ ಹೆಸರಿನಲ್ಲಿ ರಾಜಕೀಯ ಪಕ್ಷಪಾತದ ಹೇಳಿಕೆ ಸಲ್ಲದು. ಇಂತಹ ಹೇಳಿಕೆ ನೀಡುವ ಪ್ರವೃತ್ತಿಯಿಂದ ಈ ಹಿಂದೆ ನಾವು ಸೇವೆ ಸಲ್ಲಿಸಿದ್ದ ಸಂಸ್ಥೆಗಳಿಗೆ ಅಪಚಾರ ಬಗೆದಂತೆ ಆಗುತ್ತದೆ. ನ್ಯಾಯಮೂರ್ತಿಗಳನ್ನು ರಾಜಕೀಯ ದಾಳಗಳಂತೆ ಚಿತ್ರಿಸಲಾಗುತ್ತದೆ’ ಎಂದು ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳು ಸೇರಿದಂತೆ 56 ನಿವೃತ್ತ ನ್ಯಾಯಮೂರ್ತಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ರಾಜಕೀಯದ ಹಾದಿ ಹಿಡಿದವರು ತಮ್ಮನ್ನು ತಾವೇ ಸಮರ್ಥಿಸಿಕೊಳ್ಳಬೇಕು. ನ್ಯಾಯಾಂಗ ಸಂಸ್ಥೆಯನ್ನು ಇದರಿಂದ ಹೊರಗಿಡಬೇಕು’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಅಮಿತ್ ಶಾ ಅವರ ಹೇಳಿಕೆ ಖಂಡಿಸಿ 18 ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿರುವುದು ದುರದೃಷ್ಟಕರ’ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಪಿ. ಸದಾಶಿವಂ, ರಂಜನ್ ಗೊಗೊಯಿ, ನಿವೃತ್ತ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಹಾಗೂ ಮುಕೇಶ್ ಕುಮಾರ್.ಆರ್. ಶಾಹ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕೇರಳ, ರಾಜಸ್ಥಾನ, ಪಟ್ನಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಸುರೇಶ್ ಕೈತ್, ಅಲಿ ಮೊಹಮ್ಮದ್ ಮಾರ್ಗೆ, ನವನಿತಿ ಪ್ರಸಾದ್ ಸಿಂಗ್, ಎಸ್.ಕೆ.ಮಿತ್ತಲ್, ಎಲ್. ನರಸಿಂಹ ರೆಡ್ಡಿ ಪತ್ರಕ್ಕೆ ಸಹಿಹಾಕಿದ ಪ್ರಮುಖರಾಗಿದ್ದಾರೆ.
ಪಿ. ಸದಾಶಿವಂ ಅವರು ನಿವೃತ್ತಿ ನಂತರ 2014ರಿಂದ 2019ರವರೆಗೆ ಕೇರಳದ ರಾಜ್ಯಪಾಲರಾಗಿದ್ದರು. ರಂಜನ್ ಗೊಗೊಯಿ ಅವರು ಪ್ರಸ್ತುತ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.