ADVERTISEMENT

ವಾಯು ಮಾಲಿನ್ಯ ತಗ್ಗಿಸಲು ದೆಹಲಿ ಸುತ್ತಮುತ್ತ ಮೋಡಬಿತ್ತನೆಗೆ ಚಾಲನೆ

ವಾಯು ಮಾಲಿನ್ಯ ತಗ್ಗಿಸಲು ಸರ್ಕಾರದ ಪ್ರಯತ್ನ: ಸಚಿವ ಮಜಿಂದರ್ ಸಿಂಗ್ ಸಿರ್ಸಾ

ಪಿಟಿಐ
Published 28 ಅಕ್ಟೋಬರ್ 2025, 13:34 IST
Last Updated 28 ಅಕ್ಟೋಬರ್ 2025, 13:34 IST
ನವದೆಹಲಿ ಆಗಸದಲ್ಲಿ ಮೋಡಬಿತ್ತನೆ ಮಾಡುವ ಕಾರ್ಯದಲ್ಲಿ ತೊಡಗಿದ್ದ ವಿಮಾನ   – ಪಿಟಿಐ ಚಿತ್ರ
ನವದೆಹಲಿ ಆಗಸದಲ್ಲಿ ಮೋಡಬಿತ್ತನೆ ಮಾಡುವ ಕಾರ್ಯದಲ್ಲಿ ತೊಡಗಿದ್ದ ವಿಮಾನ   – ಪಿಟಿಐ ಚಿತ್ರ    

ನವದೆಹಲಿ: ಚಳಿಗಾಲದಲ್ಲಿ ದೆಹಲಿಯಲ್ಲಿ ಉಂಟಾಗುವ ವಾಯುಮಾಲಿನ್ಯ ತಡೆಗಟ್ಟುವುದಕ್ಕಾಗಿ  ಐಐಟಿ–ಕಾನ್ಪುರದ ಸಹಯೋಗದಲ್ಲಿ ದೆಹಲಿ ಸರ್ಕಾರ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಮೋಡಬಿತ್ತನೆ ಕಾರ್ಯ ಕೈಗೊಂಡಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶದಲ್ಲಿ ಈ ಪ್ರಯೋಗವನ್ನು ವಿಸ್ತರಿಸಲಾಗುವುದು ಎಂದು ಪರಿಸರ ಇಲಾಖೆ ಸಚಿವ ಮಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

ಮೋಡಬಿತ್ತನೆ ಮಾಡುವ ವಿಮಾನವು ಕಾನ್ಪುರದಿಂದ ಹಾರಾಟ ಆರಂಭಿಸಿ, ದೆಹಲಿ ಸುತ್ತಮುತ್ತಲಿನ ಪ್ರದೇಶಗಳಾದ ಬುರಾರಿ, ಉತ್ತರ ಕರೋಲ್ ಬಾಘ್‌ ಮತ್ತು ಮಯೂರ್‌ ವಿಹಾರ ಪ್ರದೇಶಗಳಲ್ಲಿ ಕಾರ್ಯಾಚರಣೆ ಪೂರ್ಣಗೊಳಿಸಿ, ಮೀರತ್‌ ವಾಯ ನೆಲೆಯಲ್ಲಿ ಇಳಿಯಿತು.

ADVERTISEMENT

‘ಎಂಟು ಗನ್‌ಗಳ ಮೂಲಕ ಅರ್ಧ ಗಂಟೆಗಳ ಕಾಲ ರಾಸಾಯನಿಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡಿತು’ ಎಂದು ಸಚಿವ ಸಿರ್ಸಾ ವಿಡಿಯೊ ಮೂಲಕ ಮಾಹಿತಿ ನೀಡಿದ್ದಾರೆ.

‘ಮೋಡಬಿತ್ತನೆ ಪ್ರಕ್ರಿಯೆ ನಡೆದ 15 ನಿಮಿಷದಿಂದ 4 ಗಂಟೆಗಳ ಒಳಗೆ ಮಳೆಯ ಮೋಡಗಳು ಸೃಷ್ಟಿಯಾಗುತ್ತವೆ ಎಂದು ಐಐಟಿ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ’ ಎಂದು ಸಿರ್ಸಾ ತಿಳಿಸಿದರು.

ಮೋಡ ಬಿತ್ತನೆಯ ಎರಡನೇ ಪ್ರಯೋಗ ದೆಹಲಿಯ ಹೊರವಲಯದಲ್ಲಿ ನಡೆಸಲಾಗುತ್ತದೆ. ಇಂಥ ಸುಮಾರು ಹತ್ತು ಪ್ರಯೋಗಗಳನ್ನು ದೆಹಲಿಯ ಸುತ್ತಮುತ್ತ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.

‘ಮಾಲಿನ್ಯವನ್ನು ತಗ್ಗಿಸಲು ಸರ್ಕಾರ ತೆಗೆದುಕೊಂಡ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ಪ್ರಯೋಗಗಳು ಯಶಸ್ವಿಯಾದರೆ, ದೀರ್ಘಾವಧಿಯಲ್ಲಿ ಯೋಜನೆಯನ್ನು ರೂಪಿಸಲಿದ್ದೇವೆ’ ಎಂದು ಸಿರ್ಸಾ ಭವಿಷ್ಯದ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಕಳೆದ ವಾರ ಬುರಾರಿ ಪ್ರದೇಶದಲ್ಲಿ ಪರೀಕ್ಷಾರ್ಥವಾಗಿ ಮೋಡಬಿತ್ತನೆ ಕಾರ್ಯವನ್ನು ನಡೆಸಲಾಗಿತ್ತು. ಮೋಡಬಿತ್ತನೆಗೆ ಬಳಸುವ ಸಿಲ್ವರ್ ಅಯೋಡೈಡ್ ಮತ್ತು ಸೋಡಿಯಂ ಕ್ಲೋರೈಡ್ ಸಂಯುಕ್ತಗಳ ರಾಸಾಯನಿಕವನ್ನು ಅಲ್ಪ ಪ್ರಮಾಣದಲ್ಲಿ ಸಿಂಪಡಿಸಲಾಗಿತ್ತು.

ಮೋಡಬಿತ್ತನೆಗೆ ಬಳಸಿರುವ ವಿಮಾನ   – ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.