ADVERTISEMENT

ಗೋವಾ: ಸರ್ಕಾರ ರಚನೆಗೆ ಕಾಂಗ್ರೆಸ್‌ ಹಕ್ಕು ಮಂಡನೆ

ಪರ್‍ರೀಕರ್ ಭೇಟಿಯಾದ ಶಾ

ಪಿಟಿಐ
Published 18 ಸೆಪ್ಟೆಂಬರ್ 2018, 3:50 IST
Last Updated 18 ಸೆಪ್ಟೆಂಬರ್ 2018, 3:50 IST
ಮನೋಹರ ಪರ್‍ರೀಕರ್‌
ಮನೋಹರ ಪರ್‍ರೀಕರ್‌   

ಪಣಜಿ: ಗೋವಾದಲ್ಲಿ ಹೊಸ ಸರ್ಕಾರ ರಚನೆಗೆ ಅವಕಾಶ ಕೊಡಬೇಕು ಎಂದು ಕೋರಿ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರಿಗೆ ವಿರೋಧ ಪಕ್ಷ ಕಾಂಗ್ರೆಸ್‌ ಮನವಿ ಸಲ್ಲಿಸುವುದರೊಂದಿಗೆ ಅಲ್ಲಿನ ರಾಜಕೀಯ ಬೆಳವಣಿಗೆ ಮತ್ತೊಂದು ತಿರುವು ಪಡೆದುಕೊಂಡಿದೆ.

ಮುಖ್ಯಮಂತ್ರಿ ಮನೋಹರ ಪರ್‍ರೀಕರ್‌ ಅವರು ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾದ ನಂತರ ಗೋವಾದಲ್ಲಿ ರಾಜಕೀಯ ಗೊಂದಲ ಸೃಷ್ಟಿಯಾಗಿದೆ. ಇಲ್ಲಿ, ಪರ್‍ರೀಕರ್ ನೇತೃತ್ವದ ಮೈತ್ರಿಕೂಟ ಸರ್ಕಾರ ಅಸ್ತಿತ್ವದಲ್ಲಿದೆ.

ರಾಜ್ಯ ಬಿಜೆಪಿಯ ಮುಖಂಡರು ಮತ್ತು ಮೈತ್ರಿ ಪಕ್ಷದ ನಾಯಕರ ಜತೆಗೆ ಮಾತನಾಡಿ ರಾಜಕೀಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಹಿರಿಯ ಮುಖಂಡರಾದ ರಾಮ್‌ ಲಾಲ್‌, ಬಿ.ಎಲ್‌. ಸಂತೋಷ್‌ ಮತ್ತು ವಿನಯ ಪುರಾಣಿಕ್‌ ಅವರನ್ನು ಬಿಜೆಪಿ ಕಳುಹಿಸಿದ ಬೆನ್ನಿಗೇ ರಾಜ್ಯಪಾಲರಿಗೆಕಾಂಗ್ರೆಸ್‌ ಮನವಿ ಕೊಟ್ಟಿದೆ.

ADVERTISEMENT

ವಿಧಾನಸಭೆ ವಿಸರ್ಜಿಸಬಾರದು. ಅಂತಹ ಸಂದರ್ಭ ಬಂದರೆ ಸರ್ಕಾರ ರಚಿಸಲು ಕಾಂಗ್ರೆಸ್‌ ಪಕ್ಷವನ್ನು ಆಹ್ವಾನಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಚಂದ್ರಕಾಂತ್‌ ಕಾವಲೇಕರ್‌ ಹೇಳಿದ್ದಾರೆ.

ತನಗೆ ಆಡಳಿತ ನಡೆಸಲು ಸಾಧ್ಯವಿಲ್ಲದ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಅಭ್ಯಾಸ ಬಿಜೆಪಿಗೆ ಇದೆ. ಆದರೆ, ಗೋವಾದಲ್ಲಿ ಅದಕ್ಕೆ ಅವಕಾಶ ಕೊಡುವುದಿಲ್ಲ. ಪರ್‍ರೀಕರ್‌ ಅವರು ಅನಾರೋಗ್ಯಕ್ಕೀಡಾದ ಬಳಿಕ ಆಡಳಿತ ಮೈತ್ರಿಕೂಟದಲ್ಲಿ ಒಳಜಗಳ ಆರಂಭವಾಗಿದೆ. ಹಾಗಾಗಿ ವಿಧಾನಸಭೆ ವಿಸರ್ಜನೆಗೆ ಬಿಜೆಪಿ ಪ್ರಯತ್ನಿಸಬಹುದು ಎಂದು ಕಾವಲೇಕರ್‌ ಹೇಳಿದ್ದಾರೆ.

ಗೋವಾದಲ್ಲಿ ಕಾಂಗ್ರೆಸ್‌ ಅತ್ಯಂತ ದೊಡ್ಡ ಪಕ್ಷವಾಗಿದೆ. ಇತರ ಪಕ್ಷಗಳ ಶಾಸಕರ ಬೆಂಬಲವೂ ಇದೆ. ಹಾಗಾಗಿ ಅವಕಾಶ ಕೊಟ್ಟರೆ ಕಾಂಗ್ರೆಸ್‌ ನೇತೃತ್ವದಲ್ಲಿ ಸರ್ಕಾರ ರಚನೆ ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಬಿಜೆಪಿಯಿಂದಲೇ ಪರಿಹಾರ: ಎಂಜಿಪಿ

ರಾಜ್ಯದ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯೇ ಪರಿಹಾರ ಸೂಚಿಸಬೇಕು. ಗೋವಾದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಆದರೆ, ಈ ಮೈತ್ರಿಕೂಟದಲ್ಲಿ ಬಿಜೆಪಿಯೇ ದೊಡ್ಡ ಪಕ್ಷವಾಗಿರುವುದರಿಂದ ಪರಿಹಾರ ಕಂಡುಕೊಳ್ಳುವುದು ಆ ಪಕ್ಷದ ಹೊಣೆ ಎಂದು ಎಂಜಿಪಿ ಮುಖ್ಯಸ್ಥ ಮನೋಹರ ಧವಳೀಕರ್‌ ಹೇಳಿದ್ದಾರೆ.

ನಾಯಕತ್ವ ಬದಲಾಯಿಸಬೇಕಾದ ಸಂದರ್ಭ ಎದುರಾದರೆ, ಈಗಿನ ಸಚಿವ ಸಂಪುಟದ ಅತ್ಯಂತ ಹಿರಿಯ ಸಚಿವರಿಗೆ ನಾಯಕತ್ವ ನೀಡಬೇಕು ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮನೋಹರ ಅವರ ಅಣ್ಣ ಸುದಿನ್‌ ಧವಳೀಕರ್‌ ಅವರು ಪರ್‍ರೀಕರ್‌ ಸಂಪುಟದ ಅತ್ಯಂತ ಹಿರಿಯ ಸಚಿವರಾಗಿದ್ದಾರೆ.ಮೈತ್ರಿಕೂಟದಲ್ಲಿರುವ ಮತ್ತೊಂದು ಪಕ್ಷವಾದ ಗೋವಾ ಫಾರ್ವರ್ಡ್‌ ಪಾರ್ಟಿಯು ಎಂಜಿಪಿಯ ಈ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದೆ.

ಪರ್‍ರೀಕರ್ ಭೇಟಿಯಾದ ಶಾ

ಪರ್‍ರೀಕರ್‌ ಅವರನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಏಮ್ಸ್‌ನಲ್ಲಿ ಸೋಮವಾರ ಭೇಟಿಯಾದರು. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ವಿಜಯ ಗೋಯಲ್‌ ಅವರೂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷವು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಈ ಭೇಟಿ ನಡೆಯಿತು.

ಪರ್‍ರೀಕರ್‌ ಅವರ ಸ್ಥಿತಿ ಗಂಭೀರವಾಗಿ ಇಲ್ಲ. ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಅಷ್ಟೇ ಎಂದು ಏಮ್ಸ್‌ ಮೂಲಗಳು ಹೇಳಿವೆ.

***

ಗೋವಾ ವಿಧಾನಸಭೆ ಬಲಾಬಲ

ಒಟ್ಟು 40

ಕಾಂಗ್ರೆಸ್‌ 16

ಬಿಜೆಪಿ 14

ಗೋವಾ ಫಾರ್ವರ್ಡ್‌ ಪಾರ್ಟಿ 3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.