
ಬೆಂಗಳೂರು: ಕೇರಳ ಸರ್ಕಾರ ರೂಪಿಸಿರುವ ಮಲಯಾಳ ಭಾಷಾ ಮಸೂದೆ ಕುರಿತು ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.
‘ಸಂವಿಧಾನವು ಭಾಷಾ ಅಲ್ಪಸಂಖ್ಯಾತರಿಗೆ ದೃಢವಾದ ರಕ್ಷಣೆ ಒದಗಿಸಿದೆ. ಕನ್ನಡ ಭಾಷೆಯ ಮೇಲೆ ಕರ್ನಾಟಕಕ್ಕೆ ಅಪಾರ ಹೆಮ್ಮೆ ಇದೆ. ನಮ್ಮ ಭಾಷೆಯ ಪ್ರೋತ್ಸಾಹ ಮತ್ತೊಂದು ಭಾಷೆಯ ಮೇಲೆ ಹೇರಿಕೆಯಾಗಬಾರದು ಎಂಬ ತತ್ವವನ್ನು ಪಾಲಿಸಿಕೊಂಡು ಬಂದಿದ್ದೇವೆ. ಈ ನಂಬಿಕೆಯೇ ನಮ್ಮ ನೀತಿ, ಸೌಹಾರ್ದಕ್ಕೂ ಮೂಲವಾಗಿದೆ. ಮಸೂದೆ ಜಾರಿಯಾದರೆ ಅದನ್ನು ವಿರೋಧಿಸುತ್ತೇವೆ. ಗಡಿನಾಡ ಕನ್ನಡಿಗರ ರಕ್ಷಣೆಗೆ ನಿಲ್ಲಲಿದ್ದೇವೆ. ಹಾಗಾಗಿ, ಮಸೂದೆ ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.
‘ಕರ್ನಾಟಕ ಮತ್ತು ಕೇರಳ ಭೌಗೋಳಿಕ ಸಮೀಪ್ಯವಷ್ಟೇ ಅಲ್ಲದೆ, ಆಳವಾದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಮಾನವೀಯ ಬಂಧಗಳಿಂದ ಕೂಡಿದ್ದು, ದೀರ್ಘಕಾಲದ ಸಂಬಂಧವನ್ನು ಹೊಂದಿವೆ. ಕಾಸರಗೋಡು ಮತ್ತಿತರ ಗಡಿ ಪ್ರದೇಶಗಳು ಆತ್ಮಸ್ಫೂರ್ತಿಯ ಜೀವಂತ ಉದಾಹರಣೆಗಳಾಗಿವೆ. ಅಲ್ಲಿ ಮಲಯಾಳ, ಕನ್ನಡ, ತುಳು, ಬ್ಯಾರಿ ಹಾಗೂ ಇತರ ಭಾಷೆಗಳು ತಲೆಮಾರುಗಳಿಂದ ದಿನನಿತ್ಯದ ಜೀವನ, ಶಿಕ್ಷಣ ಮತ್ತು ಗುರುತನ್ನು ರೂಪಿಸಿಕೊಂಡು ಬಂದಿವೆ. ಗಡಿಭಾಗದ ಜಿಲ್ಲೆಗಳ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಮಲಯಾಳ ಮಾಧ್ಯಮವನ್ನು ಪ್ರಥಮ ಭಾಷೆಯಾಗಿಸುತ್ತಿರುವುದು ಆತಂಕ ಮೂಡಿಸಿದೆ’ ಎಂದಿದ್ದಾರೆ.
‘ಭಾಷೆ ಆಧಾರಿತ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾಷೆ ಕೇವಲ ಶೈಕ್ಷಣಿಕ ಆಯ್ಕೆಯಲ್ಲ, ಅದು ಅವರ ಗುರುತು ಮತ್ತು ಅವಕಾಶಗಳ ಮೂಲ. ಒಂದೇ ಭಾಷೆಯನ್ನು ಬಲವಂತವಾಗಿ ವಿಧಿಸುವ ಯಾವುದೇ ನೀತಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಉಂಟು ಮಾಡುತ್ತದೆ. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸಿ, ಶಿಕ್ಷಣ ವ್ಯವಸ್ಥೆಗಳನ್ನು ಅಸ್ಥಿರಗೊಳಿಸುವ ಅಪಾಯವಿದೆ. ವಿಶೇಷವಾಗಿ ಕಾಸರಗೋಡು ಮಕ್ಕಳು ಕನ್ನಡ ಮಾಧ್ಯಮ ಶಿಕ್ಷಣವನ್ನು ಅವಲಂಬಿಸಿದ್ದಾರೆ. ಕರ್ನಾಟಕದ ಜತೆಗಿನ ದಶಕಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂಪರ್ಕ ಈ ಆಯ್ಕೆಗೆ ಕಾರಣವಾಗಿದೆ. ಜನರ ಆಯ್ಕೆಯನ್ನು ಗೌರವಿಸುವುದು ಮಲಯಾಳ ಭಾಷೆಯ ಗೌರವವನ್ನು ಕುಗ್ಗಿಸುವುದಿಲ್ಲ. ಬದಲಾಗಿ ಭಾರತದ ಬಹುತ್ವವನ್ನು ಬಲಪಡಿಸುತ್ತದೆ’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.