ADVERTISEMENT

ದೆಹಲಿಯಲ್ಲಿ ಮೈಕೊರೆವ ಚಳಿ: ವಾಯು ಗುಣಮಟ್ಟದಲ್ಲಿ ಕುಸಿತ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 5:36 IST
Last Updated 26 ಡಿಸೆಂಬರ್ 2020, 5:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿ ಮುಂದುವರಿದಿದೆ. ನಗರದ ಅನೇಕ ಭಾಗಗಳಲ್ಲಿ ಕವಿದಿದ್ದ ದಟ್ಟ ಮಂಜು ಕ್ರಮೇಣ ಕಡಿಮೆಯಾಗುತ್ತಿದೆ.

ಭಾನುವಾರ ತಾಪಮಾನದಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ. ಸೋಮವಾರವೂ ತಾಪಮಾನದಲ್ಲಿ ಹೆಚ್ಚಳ ಕಾಣಬಹುದು. ಡಿ. 29ರ ನಂತರ ಮತ್ತೆ ಶೀತ ಮಾರುತಗಳು ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲದೀಪ್‌ ಶ್ರೀವಾಸ್ತವ ಹೇಳಿದರು.

ಸಫ್ದರ್‌ಜಂಗ್‌ ವೀಕ್ಷಣಾಲಯದ ಮಾಹಿತಿ ಪ್ರಕಾರ, ಶನಿವಾರ 5 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ತಾಪಮಾನ ದಾಖಲಾಗಿತ್ತು. ಕಳೆದ ನಾಲ್ಕು ದಿನಗಳಿಂದಲೂ ಇದೇ ಪರಿಸ್ಥಿತಿ ಇತ್ತು ಎಂದು ಅವರು ತಿಳಿಸಿದರು.

ADVERTISEMENT

ನಗರದಲ್ಲಿ ಕವಿದಿದ್ದ ಮಂಜು ಕ್ರಮೇಣ ಕರಗುತ್ತಿದೆ. ಕೆಲ ದಿನಗಳ ಹಿಂದೆ 100 ಮೀ. ದೂರದಲ್ಲಿದ್ದ ವ್ಯಕ್ತಿ, ವಸ್ತು ಕಾರಣದಷ್ಟು ಮಂಜು ಕವಿದಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಸಫ್ದರ್‌ಜಂಗ್‌ ರಸ್ತೆಯಲ್ಲಿ 1000 ಮೀ. ದೂರದ ವರೆಗೆ ವೀಕ್ಷಿಸಲು ಸಾಧ್ಯವಾಗುತ್ತಿದ್ದರೆ, ಪಾಲಂ ಪ್ರದೇಶದಲ್ಲಿ 800 ಮೀ. ದೂರದ ವರೆಗೆ ನೋಡಲು ಸಾಧ್ಯವಾಗುತ್ತಿದೆ. ಅಷ್ಟರ ಮಟ್ಟಿಗೆ ಮಂಜು ಕರಗಿದೆ ಎಂದು ಶ್ರೀವಾಸ್ತವ ಹೇಳಿದರು.

ವಾತಾವರಣದಲ್ಲಿ ತೇವಾಂಶದ ಪ್ರಮಾಣ ಹೆಚ್ಚುತ್ತಿರುವ ಕಾರಣ ಸೋಮವಾರದಿಂದ ದೆಹಲಿಯ ವಾಯುವಿನ ಗುಣಮಟ್ಟ ಮತ್ತೆ ಕುಸಿಯಲಿದೆ. ಗಾಳಿಯ ವೇಗ ಹಾಗೂ ತಾಪಮಾನದಲ್ಲಿನ ಇಳಿಕೆಯೂ ಈ ವಿದ್ಯಮಾನಕ್ಕೆ ಕಾರಣವಾಗಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.