ADVERTISEMENT

ಉತ್ತರ ಭಾರತದಲ್ಲಿ ಮೈ ಕೊರೆಯುವ ಚಳಿ

ಹಿಮದಿಂದ ಆವರಿಸಿರುವ ಶಿಮ್ಲಾ, ಕುಲು, ಮನಾಲಿ

ಪಿಟಿಐ
Published 26 ಡಿಸೆಂಬರ್ 2018, 20:00 IST
Last Updated 26 ಡಿಸೆಂಬರ್ 2018, 20:00 IST
   

ನವದೆಹಲಿ: ಉತ್ತರ ಭಾರತದಲ್ಲಿ ಮೈಕೊರೆಯುವ ಚಳಿ ಮತ್ತು ಶೀತಗಾಳಿ ತೀವ್ರತೆ ಹೆಚ್ಚಿದ್ದು ಬುಧವಾರ ಬೆಳಗ್ಗೆ ಕನಿಷ್ಠ ಉಷ್ಣಾಂಶ ಶೂನ್ಯಕ್ಕಿಂತ ಕೆಳಗೆ ಕುಸಿದಿದೆ.

ಜಮ್ಮು ಮತ್ತು ಕಾಶ್ಮೀರ, ಲೇಹ್‌–ಲಡಾಖ್‌, ಹಿಮಾಚಲ ಪ್ರದೇಶಗಳ ಕೆಲವೆಡೆ ಹಿಮಪಾತವಾಗುತ್ತಿದೆ. ರಕ್ತ ಹೆಪ್ಪುಗಟ್ಟುವಂತಹ ಚಳಿಯಿಂದಾಗಿ ಜನರು ರಾತ್ರಿ ಹೊತ್ತು ಮನೆಯಿಂದ ಹೊರಗೆ ಕಾಲಿಡಲು ಹಿಂಜರಿಯುತ್ತಿದ್ದಾರೆ.

ಕಾಶ್ಮೀರದಲ್ಲಿ ಸರೋವರ, ಹಳ್ಳ, ಕೊಳ್ಳಗಳ ನೀರು ಮಂಜುಗಟ್ಟಿದೆ. ಕೊಳಾಯಿಗಳಲ್ಲಿ ನೀರು ಹೆಪ್ಪುಗಟ್ಟಿದ್ದರಿಂದ ಪೂರೈಕೆ ಸ್ಥಗಿತಗೊಂಡಿದೆ.

ADVERTISEMENT

ಕಣಿವೆ ರಾಜ್ಯದಲ್ಲಿ ಇದೇ 21ರಿಂದ 40 ದಿನಗಳ ಚಳಿಗಾಲ ಉತ್ಸವ ಆರಂಭವಾಗಿದ್ದು, ಜನವರಿ 30ರಂದು ಮುಕ್ತಾಯವಾಗಲಿದೆ. ಚಿಲ್ಲಿ ಕಲಾನ್‌, ಚಿಲ್ಲಿ ಖುರ್ದ್‌ ಮತ್ತು ಚಿಲ್ಲಿ ಬಚ್ಚಾ ಉತ್ಸವಗಳಿಗೆ ಪ್ರವಾಸಿಗರು ಬರುತ್ತಿದ್ದಾರೆ. ಐದಾರು ದಿನಗಳ ನಂತರ ತೀವ್ರ ಹಿಮಪಾತ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದೆಹಲಿ ಮೇಲೆ ಮಂಜಿನ ಹೊದಿಕೆ

ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಮಾಲಿನ್ಯ ಪ್ರಮಾಣ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿದೆ.

ವಾತಾವರಣದಲ್ಲಿ ಧೂಳಿನ ಕಣಗಳ ಪ್ರಮಾಣ ತಗ್ಗಿದ್ದು, ವಾಯು ಗುಣಮಟ್ಟ ಸೂಚ್ಯಂಕ 396ರಷ್ಟಿದೆ. ಆದರೂ, ವಾತಾವರಣ ಅಪಾಯಮಟ್ಟದಲ್ಲಿಯೇ ಮುಂದುವರಿದಿದೆ.

ಚಳಿ ಮತ್ತು ಮಂಜು ಆವರಿಸಿದ್ದರಿಂದ ದೆಹಲಿಯ ಮೇಲೆ ಬಿಳಿ ಮಂಜಿನ ಹೊದಿಕೆ ಹೊದಿಸಿದಂತಾಗಿದೆ. ಮಂದ ಬೆಳಕಿನಿಂದ ವಾಹನ ಸಂಚಾರರು ಪರದಾಡುತ್ತಿದ್ದಾರೆ. ನಗರದ ಹೊರವಲಯಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ.
ಕನಿಷ್ಠ ತಾಪಮಾನ

ದೆಹಲಿಯಲ್ಲಿ ಬುಧವಾರ ಕನಿಷ್ಠ ಉಷ್ಣಾಂಶ 3.6 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ಈ ವರ್ಷ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಇದಾಗಿದೆ. ಇನ್ನೂ ಮೂರ‍್ನಾಲ್ಕು ದಿನಗಳಲ್ಲಿ ದೆಹಲಿ ಉಷ್ಣಾಂಶ 3 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕೆಳಗೆ ಕುಸಿಯುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಶೀತಗಾಳಿ ಮತ್ತು ಮಾಲಿನ್ಯದಿಂದ ಆರೋಗ್ಯ ಸಮಸ್ಯೆಗಳು ಬಿಗಡಾಯಿಸಿವೆ. ಮಕ್ಕಳು ಮತ್ತು ವೃದ್ಧರು ನೆಗಡಿ, ಒಣಕೆಮ್ಮು, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದಾರೆ.

ದೆಹಲಿ ಸುತ್ತಮುತ್ತ ಕಟ್ಟಡ ನಿರ್ಮಾಣ ಕಾಮಗಾರಿ, ತ್ಯಾಜ್ಯ ಸುಡುವುದರ ಮೇಲೆ ಹೇರಲಾಗಿದ್ದ ನಿರ್ಬಂಧ ಮುಂದುವರಿಯಲಿದೆ. ಮಾಲಿನ್ಯ ಹತೋಟಿಗೆ ಭಾರಿ ವಾಹನಗಳ ಪ್ರವೇಶವನ್ನು ಕೂಡ ನಿರ್ಬಂಧಿಸಲಾಗಿದೆ. ಹೊಗೆ ಉಗುಳುವ ಕಾರ್ಖಾನೆಗಳ ಮೇಲೆ ನಿಗಾ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.