ADVERTISEMENT

ಕೊಲಿಜಿಯಂ ಮಾದರಿಯಲ್ಲಿ ಸಿಇಸಿ ನೇಮಕಕ್ಕೆ ಕೋರಿಕೆ

ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಅರ್ಜಿ ವರ್ಗಾಯಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 23 ಅಕ್ಟೋಬರ್ 2018, 11:16 IST
Last Updated 23 ಅಕ್ಟೋಬರ್ 2018, 11:16 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ:ಕೊಲಿಜಿಯಂ ಮಾದರಿಯಲ್ಲಿಯೇ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಹಾಗೂ ಚುನಾವಣಾ ಆಯುಕ್ತರ (ಇಸಿ) ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಸುಪ್ರೀಂ ಕೋರ್ಟ್‌ ವರ್ಗಾಯಿಸಿದೆ.

ನ್ಯಾಯಾಧೀಶರ ನೇಮಕಾತಿ ಮಾದರಿಯಲ್ಲಿಯೇ ಸಿಇಸಿ, ಇಸಿಗಳ ನೇಮಕಾತಿ ನಡೆಸಬೇಕು ಎಂದು ವಕೀಲ ಪ್ರಶಾಂತ ಭೂಷಣ ಅವರ ವಾದವನ್ನು ಆಲಿಸಿದ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಮತ್ತು ಎಸ್.ಕೆ. ಕೌಲ್‌ ಅವರಿದ್ದ ಪೀಠವು, ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ಮಂಗಳವಾರ ವರ್ಗಾಯಿಸಿತು.

ಅನೂಪ್‌ ಬರನ್‌ವಾಲ್‌ ಎಂಬುವರು ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಸಿಇಸಿಗಳ ನೇಮಕಾತಿ ಪಾರದರ್ಶಕವಾಗಿ ನಡೆಯಬೇಕು ಎಂದು ಮನವಿ ಮಾಡಿದ್ದರು.

ADVERTISEMENT

ಕೇಂದ್ರ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಈ ಕೋರಿಕೆಗೆ ವಿರೋಧ ವ್ಯಕ್ತಪಡಿಸಿದರು. ‘ಸಿಇಸಿ ಹುದ್ದೆಯ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿಯೇ ನಡೆಯುತ್ತಿದೆ. ಅದಕ್ಕೆ ಚ್ಯುತಿ ತರುವಂತಹ ಕೆಲಸ ನಡೆದಿಲ್ಲ. ಈಗಿರುವ ನೇಮಕಾತಿ ಪ್ರಕ್ರಿಯೆಯೇ ಉತ್ತಮವಾಗಿದ್ದು, ಟಿ.ಎನ್. ಶೇಷನ್‌ರಂತಹ ಅನೇಕರು ಈ ಹುದ್ದೆಯ ಘನತೆಯನ್ನು ಎತ್ತಿ ಹಿಡಿದಿರುವುದನ್ನು ಸ್ಮರಿಸಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.