ADVERTISEMENT

ಒಬಿಸಿ ಒಳ ವರ್ಗೀಕರಣ ಆಯೋಗದ ಅವಧಿ ಮತ್ತೆ 6 ತಿಂಗಳು ವಿಸ್ತರಣೆ

ಪಿಟಿಐ
Published 25 ಜನವರಿ 2023, 16:08 IST
Last Updated 25 ಜನವರಿ 2023, 16:08 IST

ನವದೆಹಲಿ : ‘ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿ’ಯ ಒಳ ವರ್ಗೀಕರಣಕ್ಕಾಗಿ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಜಿ.ರೋಹಿಣಿ ಆಯೋಗದ ಅಧಿಕಾರ ಅವಧಿಯನ್ನು ಇನ್ನೂ ಆರು ತಿಂಗಳು ಅಂದರೆ ಜುಲೈ 31ರವರೆಗೆ ರಾಷ್ಟ್ರಪತಿ ಅವರು ವಿಸ್ತರಿಸಿದ್ದಾರೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ನ್ಯಾ. ಜಿ.ರೋಹಿಣಿ ಅವರ ನೇತೃತ್ವದ ಐವರು ಸದಸ್ಯರ ಆಯೋಗವನ್ನು 2017ರಲ್ಲಿ ರಚಿಸಲಾಗಿತ್ತು. ಇದರ ಅಧಿಕಾರ ಅವಧಿಯನ್ನು ಇದುವರೆಗೆ 13 ಬಾರಿ ವಿಸ್ತರಿಸಿದಂತಾಗಿದೆ. ಆಯೋಗದ ಅಧಿಕಾರಾವಧಿ ವಿಸ್ತರಣೆಗೆ ಕೇಂದ್ರ ಸಂಪುಟ ಕಳೆದ ವಾರ ತನ್ನ ಒಪ್ಪಿಗೆ ನೀಡಿತ್ತು.

ಆಯೋಗವು ತನ್ನ ವರದಿಯನ್ನು ಇದೇ ವರ್ಷದ ಜುಲೈ 31ರೊಳಗೆ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ADVERTISEMENT

‘ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿ’ಯ ಒಳ ವರ್ಗೀಕರಣದ ಕರಡು ವರದಿ ಸಿದ್ಧವಾಗಿರುವುದಾಗಿ ರೋಹಿಣಿ ಆಯೋಗವು ಸರ್ಕಾರಕ್ಕೆ ಹೇಳಿತ್ತು. ಆದರೆ, ನಂತರದಲ್ಲಿ ಕೇಂದ್ರ ಪಟ್ಟಿಯಲ್ಲಿರುವ ಸಮುದಾಯಗಳ ಪಟ್ಟಿ ಅಧ್ಯಯನಕ್ಕೆ ಹೆಚ್ಚಿನ ಸಮಯ ಕೋರಿದೆ’ ಎಂದು ಮೂಲಗಳು ತಿಳಿಸಿವೆ.

ಈ ಮೊದಲಿನ ವಿಸ್ತರಣೆಯಲ್ಲಿ ಇದೇ ಜನವರಿ 31ರ ಒಳಗೆ ವರದಿ ಸಲ್ಲಿಸುವಂತೆ ಗಡುವು ನೀಡಲಾಗಿತ್ತು. ರಾಷ್ಟ್ರಪತಿಯು ಸಂವಿಧಾನದ ವಿಧಿ 340ರಡಿಯ ಅಧಿಕಾರ ಚಲಾಯಿಸಿ ಮುಂದಿನ ಆರು ತಿಂಗಳಿಗೆ ಅಧಿಕಾರಾವಧಿ ವಿಸ್ತರಿಸಿದ್ದಾರೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಗೆಜೆಟ್‌ ಅಧಿಸೂಚನೆಯಲ್ಲಿ ಹೇಳಿದೆ.

ಮೀಸಲಾತಿ ಅನುಷ್ಠಾನದಲ್ಲಿ ತಾರತಮ್ಯ ನಿವಾರಿಸಲು ಮತ್ತು ಹಿಂದುಳಿದ ವರ್ಗಗಳ ಒಳ ವರ್ಗೀಕರಣಕ್ಕೆ ಅನುಸರಿಸಬೇಕಾದ ವಿಧಾನ ಕುರಿತು ಈ ಆಯೋಗ ವರದಿ ನೀಡಬೇಕು. ಜತೆಗೆ, ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯನ್ನು ಅತೀ ಹೆಚ್ಚು ಹಿಂದುಳಿದ, ಹೆಚ್ಚು ಹಿಂದುಳಿದ ಮತ್ತು ಹಿಂದುಳಿದ ಇತ್ಯಾದಿ ವರ್ಗಗಳಾಗಿ ವಿಂಗಡಿಸಬೇಕು. ಆ ಪ್ರಕಾರ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಆಯೋಗವನ್ನು ರಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.