
ಕಾಮನ್‌ವೆಲ್ತ್ ಸಮ್ಮೇಳನ
–ಪಿಟಿಐ ಚಿತ್ರ
ನವದೆಹಲಿ: ಭಾರತವು ವೈವಿಧ್ಯತೆಯನ್ನು ಪ್ರಜಾಪ್ರಭುತ್ವದ ಶಕ್ತಿಯನ್ನಾಗಿ ಪರಿವರ್ತಿಸಿದೆ. ಸಂಸತ್ ಸೇರಿದಂತೆ ಪ್ರಜಾಸತ್ತಾತ್ಮಕ ವೇದಿಕೆಗಳು ಜನರ ಆಶಯಗಳನ್ನು ಪ್ರತಿಬಿಂಬಿಸುವ ಕೇಂದ್ರಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾಮನ್‌ವೆಲ್ತ್ ರಾಷ್ಟ್ರಗಳ ಸಂಸತ್ತಿನ ಸ್ಪೀಕರ್‌ಗಳು ಮತ್ತು ಅಧ್ಯಕ್ಷೀಯ ಅಧಿಕಾರಿಗಳ (ಸಿಎಸ್‌ಪಿಒಸಿ) 28ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತದ ಪ್ರಜಾಪ್ರಭುತ್ವವು ಆಳವಾದ ಬೇರುಗಳಿಂದ ಬೆಂಬಲಿತವಾದ ದೊಡ್ಡ ಮರದಂತೆ’ ಎಂದು ಬಣ್ಣಿಸಿದ್ದಾರೆ.
‘ನಮಗೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ದೇಶದ ಅಗಾಧ ವೈವಿಧ್ಯತೆಯ ನಡುವೆ ಪ್ರಜಾಪ್ರಭುತ್ವ ಉಳಿಯಬಹುದೇ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದಾಗ್ಯೂ, ಈ ವೈವಿಧ್ಯತೆಯೇ ಭಾರತೀಯ ಪ್ರಜಾಪ್ರಭುತ್ವದ ಬಲವಾಯಿತು’ ಎಂದಿದ್ದಾರೆ.
‘ಪ್ರಜಾಪ್ರಭುತ್ವವು ಆಳವಾಗಿ ಬೇರೂರಿದ್ದರೂ ಸಹ, ನಮ್ಮ ದೇಶ ಅಭಿವೃದ್ಧಿ ಸಾಧಿಸಲು ಹೆಣಗಾಡುತ್ತದೆ ಎಂಬ ಸಂದೇಹವೂ ಇತ್ತು. ಈ ಅನುಮಾನಗಳಿಗೆ ವಿರುದ್ಧವಾಗಿ ಸಂಸತ್ ಸೇರಿದಂತೆ ಪ್ರಜಾಸತ್ತಾತ್ಮಕ ವೇದಿಕೆಗಳು ಜನರ ಆಶಯಗಳನ್ನು ಪ್ರತಿಬಿಂಬಿಸುವ ಕೇಂದ್ರಗಳಾಗಿವೆ. ಭಾರತ ತನ್ನ ಅನುಭವದ ಮೂಲಕ ಜಾಗತಿಕ ಪ್ರಜಾಸತ್ತಾತ್ಮಕ ಚರ್ಚೆಗಳಿಗೆ ಮಾರ್ಗದರ್ಶನ ನೀಡಲು ಸಿದ್ಧವಾಗಿದೆ’ ಎಂದು ವಿವರಿಸಿದ್ದಾರೆ.
‘ನಾವು ಚರ್ಚೆ, ಸಂವಾದ ಮತ್ತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ದೀರ್ಘ ಸಂಪ್ರದಾಯವನ್ನು ಹೊಂದಿದ್ದೇವೆ. ಅದರಂತೆಯೇ ಜಾಗತಿಕ ವೇದಿಕೆಯಲ್ಲಿ ದಕ್ಷಿಣದ ಕಳವಳಗಳ ಬಗ್ಗೆ ಬಲವಾಗಿ ಧ್ವನಿ ಎತ್ತುತ್ತಿದ್ದೇವೆ’ ಎಂದಿದ್ದಾರೆ.
ಜನವರಿ 14ರಿಂದ 16ರವರೆಗೆ ಸಂಸತ್ ಭವನದ ಸಂಕೀರ್ಣದಲ್ಲಿರುವ ಸಂವಿಧಾನ ಸದನದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ವಿವಿಧ ದೇಶಗಳ 60ಕ್ಕೂ ಹೆಚ್ಚು ಗಣ್ಯರು ಭಾಗವಹಿಸಲಿದ್ದು, ಸಂವಾದ ನಡೆಸಲಿದ್ದಾರೆ.
ಸಂಸದೀಯ ಕಾರ್ಯನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆ, ಸಂಸತ್ತಿನ ಸದಸ್ಯರ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ, ಸಂಸತ್ತಿನ ಬಗ್ಗೆ ಸಾರ್ವಜನಿಕ ತಿಳಿವಳಿಕೆಯನ್ನು ಹೆಚ್ಚಿಸಲು ಹೊಸ ತಂತ್ರಗಳು ಮತ್ತು ಮತದಾನವನ್ನು ಮೀರಿ ನಾಗರಿಕರ ಭಾಗವಹಿಸುವಿಕೆ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.