ಅಸಾದುದ್ದೀನ್ ಒವೈಸಿ
ಪಿಟಿಐ ಚಿತ್ರ
ಹೈದರಾಬಾದ್: ಪಹಲ್ಗಾಮ್ ಉಗ್ರ ದಾಳಿಯ ನಂತರ ಕಾಶ್ಮೀರದಲ್ಲಿ ಜನರು ಸ್ವಯಂಪ್ರೇರಿತವಾಗಿ ಬೀದಿಗಿಳಿದು ಪ್ರತಿಭಟಿಸುತ್ತಿರುವುದನ್ನು ನೋಡಿದರೆ ಪಾಕಿಸ್ತಾನಕ್ಕೆ ಯಾವುದೇ ಬೆಂಬಲವಿಲ್ಲವೆಂಬುದನ್ನು ತೋರಿಸುತ್ತದೆ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಶನಿವಾರ ಹೇಳಿದ್ದಾರೆ.
ಏಪ್ರಿಲ್ 22ರ ಭಯೋತ್ಪಾದಕ ದಾಳಿಯ ನಂತರ, ಪ್ರತಿ ಕಾಶ್ಮೀರಿ ಮನೆಯಲ್ಲೂ ಶೋಕಾಚರಣೆ ಇತ್ತು ಎಂದು ಒವೈಸಿ ಹೇಳಿದ್ದಾರೆ.
‘ವಾಸ್ತವವಾಗಿ, ಇದು ಸರ್ಕಾರಕ್ಕೆ, ಪ್ರಧಾನಿ ಮೋದಿಯವರಿಗೆ, ಗೃಹ ಸಚಿವ ಅಮಿತ್ ಶಾ ಅವರಿಗೆ ಒಂದು ಐತಿಹಾಸಿಕ ಅವಕಾಶ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನೀವು ಖಂಡಿತವಾಗಿಯೂ ಪಾಕಿಸ್ತಾನವನ್ನು ಎದುರಿಸಬೇಕು. ಆದರೆ, ನೀವು ಕಾಶ್ಮೀರಿಗಳನ್ನು ದತ್ತು ತೆಗೆದುಕೊಳ್ಳಬೇಕು’ ಎಂದು ಒವೈಸಿ ಅವರು ‘ಪಿಟಿಐ ವಿಡಿಯೊ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಾಶ್ಮೀರಿಗಳನ್ನು ದತ್ತು ತೆಗೆದುಕೊಳ್ಳುವುದರ ಅರ್ಥವೇನೆಂದು ವಿವರಿಸಲು ಕೇಳಿದಾಗ, ‘ಅಲ್ಲಿ ಮಾನವ ಹಕ್ಕುಗಳ ಯಾವುದೇ ಉಲ್ಲಂಘನೆ ಇಲ್ಲ ಎಂಬುದನ್ನು ಸರ್ಕಾರ ಖಾತ್ರಿಪಡಿಸಿಕೊಳ್ಳಬೇಕು. ಕಾಶ್ಮೀರಿಗಳಿಗೆ ಅವರ ಹಕ್ಕುಗಳು ಸಿಗಬೇಕು. ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದೇಶದ ಇತರ ಭಾಗಗಳಲ್ಲಿ ದಾಳಿ ನಡೆಯಬಾರದು’ ಎಂದು ಹೇಳಿದರು.
‘ಇದೆಲ್ಲವೂ ಆಗಲೇಬೇಕು. ಈ ಅವಕಾಶವನ್ನು ನಾವು ಕಳೆದುಕೊಳ್ಳಬಾರದು. ಕಾಶ್ಮೀರಿಗಳನ್ನು ಅವರ ಹಣೆಬರಹಕ್ಕೆ ಬಿಡಬೇಡಿ. ಅವರನ್ನು ದತ್ತು ತೆಗೆದುಕೊಳ್ಳಿ’ ಎಂದು ಒವೈಸಿ ಹೇಳಿದರು.
‘ಪಾಕಿಸ್ತಾನವು ರಹಸ್ಯ ಕಾರ್ಯಸೂಚಿಯನ್ನು ಹೊಂದಿರುವ ದೇಶವೆನಿಸಿದೆ. ಅಲ್ಲಿನ ಐಎಸ್ಐ ಮತ್ತು ಸೇನೆಯ ಉದ್ದೇಶ ಭಾರತವನ್ನು ಅಸ್ಥಿರಗೊಳಿಸುವುದಾಗಿದೆ. ಹಾಗಾಗಿ, ನಾವು ಪಾಕಿಸ್ತಾನವನ್ನು ನಂಬಬಾರದು’ ಎಂದು ಅವರು ಹೇಳಿದರು.
ಭಾರತದಲ್ಲಿ ಅಸ್ಥಿರತೆ ಮತ್ತು ಕೋಮು ವಿಭಜನೆಯನ್ನು ಹುಟ್ಟುಹಾಕುವುದು ಹಾಗೂ ನಮ್ಮ ದೇಶದ ಆರ್ಥಿಕ ಬೆಳವಣಿಗೆಯನ್ನು ತಡೆಯುವುದು ಪಾಕಿಸ್ತಾನದ ಅಲಿಖಿತ ಸಿದ್ಧಾಂತವಾಗಿದೆ.–ಅಸಾದುದ್ದೀನ್ ಒವೈಸಿ, ಎಐಎಂಐಎಂ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.