ADVERTISEMENT

ಗುಜರಾತ್: ಕಾಂಗ್ರೆಸ್, ಎಎಪಿಯಿಂದ ಹಳೆ ಪಿಂಚಣಿ ಯೋಜನೆ ಜಾರಿ ಭರವಸೆ

ಪಿಟಿಐ
Published 13 ನವೆಂಬರ್ 2022, 15:51 IST
Last Updated 13 ನವೆಂಬರ್ 2022, 15:51 IST
ಪಂಜಾಬ್‌ ಮುಖ್ಯಮಂತ್ರಿ, ಎಎಪಿ ಮುಖಂಡ ಭಗವಂತ್ ಮಾನ್‌, ಗುಜರಾತ್ ವಿಧಾನಸಭೆ ಚುನಾವಣೆಯ ಪ್ರಚಾರದ ಭಾಗವಾಗಿ ಗಿರ್‌ ಸೋಮನಾಥ್ ಜಿಲ್ಲೆಯಲ್ಲಿ ಭಾನುವಾರ ರೋಡ್‌ ಷೋ ನಡೆಸಿದರು –ಪಿಟಿಐ ಚಿತ್ರ
ಪಂಜಾಬ್‌ ಮುಖ್ಯಮಂತ್ರಿ, ಎಎಪಿ ಮುಖಂಡ ಭಗವಂತ್ ಮಾನ್‌, ಗುಜರಾತ್ ವಿಧಾನಸಭೆ ಚುನಾವಣೆಯ ಪ್ರಚಾರದ ಭಾಗವಾಗಿ ಗಿರ್‌ ಸೋಮನಾಥ್ ಜಿಲ್ಲೆಯಲ್ಲಿ ಭಾನುವಾರ ರೋಡ್‌ ಷೋ ನಡೆಸಿದರು –ಪಿಟಿಐ ಚಿತ್ರ   

ಅಹಮದಾಬಾದ್‌ (ಪಿಟಿಐ): ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ (ಒಪಿಎಸ್‌) ಮರುಜಾರಿಗೊಳಿಸಬೇಕು ಎಂಬ ಬೇಡಿಕೆಯೇ ಗುಜರಾತ್ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಪ್ರಮುಖ ವಿಷಯವಾಗುವ ಸೂಚನೆಗಳಿವೆ.

ಅಧಿಕಾರಕ್ಕೆ ಬಂದರೆ ಒಪಿಎಸ್‌ ಅನ್ನು ಮರುಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಾರ್ಟಿ (ಎಎಪಿ) ಈಗಾಗಲೇ ಭರವಸೆ ನೀಡಿವೆ. ಈ ಮೂಲಕ ಸರ್ಕಾರಿ ನೌಕರರ ಮತಗಳನ್ನು ಸೆಳೆಯುವ ವಿಶ್ವಾಸವನ್ನು ಹೊಂದಿವೆ.

ಗುಜರಾತ್‌ ವಿಧಾನಸಭೆಗೆ ಡಿಸೆಂಬರ್‌ 1 ಮತ್ತು 5ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಗುಜರಾತ್‌ನ ಬಿಜೆಪಿ ಸರ್ಕಾರ ಏಪ್ರಿಲ್‌ 1, 2005ರ ನಂತರ ಸೇವೆಗೆ ಸೇರುವ ನೌಕರರಿಗೆ ಅನ್ವಯಿಸುವಂತೆ ಎನ್‌ಪಿಎಸ್‌ ಜಾರಿಗೊಳಿಸಿದೆ.

ADVERTISEMENT

ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಜಾರಿಗೆ ಸರ್ಕಾರಿ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಭಟನೆಗಳು ನಡೆದಿವೆ. ಏಪ್ರಿಲ್‌ 2005ಕ್ಕೂ ಮೊದಲು ಸೇರಿರುವ ನೌಕರರಿಗೆ ಎನ್‌ಪಿಎಸ್‌ ಅನ್ವಯಿಸದು ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು.

ಬಿಜೆಪಿಗೆ ಬಂಡಾಯ ಭೀತಿ:

ಗುಜರಾತ್‌ನಲ್ಲಿ ಆಡಳಿತರೂಢ ಬಿಜೆಪಿಗೆ ಬಂಡಾಯದ ಭೀತಿ ಎದುರಾಗಿದ್ದು, ಪಕ್ಷದ ಐವರು ನಾಯಕರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇವರಲ್ಲಿ ಒಬ್ಬ ಹಾಲಿ ಶಾಸಕರೂ ಸೇರಿದ್ದಾರೆ.

ಈ ಐವರಿಗೆ ಪಕ್ಷ ಟಿಕೆಟ್‌ ನಿರಾಕರಿಸಿತ್ತು. ಬೆಂಬಲಿಗರ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದುಹೆಚ್ಚಿನನವರು ತಿಳಿಸಿದ್ದಾರೆ. ಮಾಜಿ ಶಾಸಕ, ಬುಡಕಟ್ಟು ಜನಾಂಗದ ಮುಖಂಡ ಹರ್ಷದ್ ವಾಸವ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವುದಿಲ್ಲ; ಪ್ರಶಾಂತ್ ಭೂಷಣ್‌

ಬೆಟ್ಟಿಯಾ (ಪಿಟಿಐ): ಬಿಹಾರ ಚುನಾವಣೆಯಲ್ಲಿ ‘ಉತ್ತಮ ಪರ್ಯಾಯ’ ರೂಪಿಸುವ ಸಂಕಲ್ಪ ತೊಟ್ಟಿರುವ ರಾಜಕೀಯ ಕಾರ್ಯತಂತ್ರರಾದ ಪ್ರಶಾಂತ್ ಭೂಷಣ್, ಸ್ವತಃ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳನ್ನು ತಳ್ಳಿಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಏಕೆ ಚುನಾವಣೆಗೆ ಸ್ಪರ್ಧಿಸಲಿ. ನನಗೆ ಅಂತಹ ಆಕಾಂಕ್ಷೆ ಇಲ್ಲ ಎಂದು ಅವರು ಈ ಕುರಿತ ಪುನರಾವರ್ತಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಪ್ರಸ್ತುತ ಪ್ರಶಾಂತ್ ಕಿಶೋರ್ ಅವರು ರಾಜ್ಯದಲ್ಲಿ 3,500 ಕಿ.ಮೀ. ಅಂತರದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದ್ದು, ಪ್ರತಿಕ್ರಿಯೆ ಆಧರಿಸಿ ಕಾರ್ಯತಂತ್ರ ರೂಪಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.