ADVERTISEMENT

ಅರ್ಥವ್ಯವಸ್ಥೆ ಹಾಳುಗೆಡವಿದ ಭಯೋತ್ಪಾದಕ ದಾಳಿ: ರಾಹುಲ್‌ ಗಾಂಧಿ

ನೋಟು ರದ್ದತಿ ನಿರ್ಧಾರಕ್ಕೆ 3 ವರ್ಷ; ಮೋದಿ ಸರ್ಕಾರದ ನಿಲುವಿಗೆ ಕಾಂಗ್ರೆಸ್‌ ತರಾಟೆ

ಪಿಟಿಐ
Published 8 ನವೆಂಬರ್ 2019, 20:00 IST
Last Updated 8 ನವೆಂಬರ್ 2019, 20:00 IST
   

ನವದೆಹಲಿ: ಮೋದಿ ನೇತೃತ್ವದ ಸರ್ಕಾರ 2016ರಲ್ಲಿ ಕೈಗೊಂಡಿದ್ಡ ನೋಟುಗಳ ರದ್ದತಿ ನಿರ್ಧಾರ ‘ದೇಶದ ಆರ್ಥಿಕ ವ್ಯವಸ್ಥೆಯನ್ನೇ ಏರುಪೇರು ಮಾಡಿದ ಭಯೋತ್ಪಾದಕ ದಾಳಿ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ನೋಟು ರದ್ದತಿ ನಿರ್ಧಾರಕ್ಕೆ ಮೂರು ವರ್ಷಗಳಾದ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ನಡೆಯನ್ನು ಕಾಂಗ್ರೆಸ್‌ ಪಕ್ಷ ಕಟುವಾಗಿ ಟೀಕಿಸಿದೆ. ‘ಮಹಮ್ಮದ್ ಬಿನ್ ತುಘಲಕ್‌ 1330ರಲ್ಲಿಯೇ ನೋಟು ನಿಷ್ಪ್ರಯೋಜಕ ಎಂದಿದ್ದ’ ಎಂದೂ ಕಾಂಗ್ರೆಸ್‌ ಹೋಲಿಕೆ ಮಾಡಿದೆ.

‘ನೋಟು ರದ್ದತಿ ನಿರ್ಧಾರ ಮೂರು ವರ್ಷಗಳ ನಂತರವೂ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಆರ್ಥಿಕ ಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಿದೆ. ಈಗ ಲೋಪವನ್ನು ಒಪ್ಪಿಕೊಳ್ಳುವ ಧೈರ್ಯ ಬಿಜೆಪಿ ಸರ್ಕಾರಕ್ಕಿದೆಯೇ’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ADVERTISEMENT

ಈ ನಡುವೆ, ನೋಟು ರದ್ದತಿ ಕುರಿತಂತೆ ನರೇಂದ್ರ ಮೋದಿ ಸರ್ಕಾರದ ತೀರ್ಮಾನವನ್ನು ಖಂಡಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಭಾರತೀಯ ರಿಸರ್ವ್ ಬ್ಯಾಂಕ್‌ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.

‘₹ 500 ಮತ್ತು ₹ 1000 ಮುಖಬೆಲೆಯ ನೋಟುಗಳಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ’ ಎಂದು 2016 ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದರು.

ಸರ್ಕಾರವನ್ನು ಟೀಕಿಸಿ ಮಾಡಿದ ಟ್ವೀಟ್‌ನಲ್ಲಿ ರಾಹುಲ್‌ಗಾಂಧಿ, ‘ನೋಟುಗಳ ರದ್ದತಿ ನಿರ್ಧಾರದ ಭಯೋತ್ಪಾದಕ ದಾಳಿ ನಡೆದು ಮೂರು ವರ್ಷವಾಗಿದೆ. ದೇಶದ ಆರ್ಥಿಕತೆ ಏರುಪೇರಾಗಿದೆ.ಹಲವರು ಸತ್ತಿದ್ದಾರೆ. ಸಣ್ಣ ಉದ್ದಿಮೆಗಳು ಮುಚ್ಚಿವೆ. ಅಸಂಖ್ಯ ಜನರು ಉದ್ಯೋಗ ಕಳೆದುಕೊಂಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ. ದಾಳಿ ನಡೆಸಿದವರು ಇನ್ನೂ ಜನತೆಗೆ ನ್ಯಾಯ ಒದಗಿಸಬೇಕಾಗಿದೆ ಎಂದಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರೂ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೋಟು ರದ್ಧತಿ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡುವ ಮೂಲಕ ದೊಡ್ಡ ಸಮಾಜಘಾತುಕವಾಗಿ ಪರಿಣಮಿಸಿತು ಎಂದಿದ್ದಾರೆ.

‘ಡಿಮಾನಿಟೈಸೇಷನ್‌ ಡಿಸಾಸ್ಟರ್‌’ ಹ್ಯಾಷ್‌ಟ್ಯಾಗ್‌ ಬಳಸಿ ಮಾಡಿದ ಟ್ವೀಟ್‌ನಲ್ಲಿ ಇದರ ಹೊಣೆಯನ್ನು ಯಾರಾದರೂ ಹೊತ್ತುಕೊಳ್ಳುವರೇ ಎಂದು ಪ್ರಶ್ನಿಸಿದ್ದಾರೆ.

‘ನೋಟು ರದ್ದತಿ ವಿಫಲ ಕಸರತ್ತು’
ಕೋಲ್ಕತ್ತ: ‘ನೋಟು ರದ್ದತಿ ನಿರ್ಧಾರ ಒಂದು ವಿಫಲ ಕಸರತ್ತು. ಇದು, ದೇಶದ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿತು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದರು.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ಭಾರತೀಯ ಅರ್ಥವ್ಯವಸ್ಥೆ ಮೇಲೆ ಜಾಗತಿಕ ಆರ್ಥಿಕ ಬಿಕ್ಕಟ್ಟು ಪರಿಣಾಮ ಬೀರಿದೆ. ನೋಟು ರದ್ದತಿ ನಿರ್ಧಾರಕ್ಕೂ ಇದಕ್ಕೂ ಸಂಬಂಧವಿಲ್ಲ’ ಎಂದು ಪ್ರತಿಪಾದಿಸಿದೆ.

‘ಬಿಜೆಪಿ ಸರ್ಕಾರದ 2016ರ ನಿರ್ಧಾರ ಹಲವರ ಬದುಕನ್ನು ಕಸಿದುಕೊಳ್ಳಲಿದೆ ಎಂಬುದು ಆರಂಭದಲ್ಲಿಯೇ ಗೊತ್ತಿತ್ತು. ಹೆಸರಾಂತ ಆರ್ಥಿಕ ತಜ್ಞರು, ಸಾಮಾನ್ಯ ಜನರು, ಪರಿಣತರು ಈಗ ಅದನ್ನು ಒಪ್ಪುತ್ತಾರೆ’ ಎಂದು ಮಮತಾ ಹೇಳಿದ್ದಾರೆ.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಾನ್‌ತಾನ್‌ ಬಸು ಅವರು, ‘ಮಮತಾ ಬ್ಯಾನರ್ಜಿ ಅವರು ತಮಗೆ ಅರ್ಥವಾಗದ ವಿಷಯ ಕುರಿತು ಮಾತನಾಡುವ ಬದಲಿಗೆ ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಲು ಒತ್ತು ನೀಡುವುದು ಉತ್ತಮ’ ಎಂದು ಸಲಹೆ ಮಾಡಿದ್ದಾರೆ.

**

ಮಹಮ್ಮದ್ ಬಿನ್ ತುಘಲಕ್‌ ನೋಟು ನಿಷ್ಪ್ರಯೋಜಕ ಎಂದು 1330ರಲ್ಲಿ ಹೇಳಿದ್ದರು. ಅಂಥದೇ ನಿರ್ಧಾರವನ್ನು ಇಂದಿನ ತುಘಲಕ್‌ 2016ರ ನವೆಂಬರ್ 8ರಂದು ಕೈಗೊಂಡರು.
-ರಣದೀಪ್‌ ಸುರ್ಜೇವಾಲಾ ,ಕಾಂಗ್ರೆಸ್‌ ವಕ್ತಾರ

**

ನೋಟು ರದ್ದತಿ ಹಲವರ ಬದುಕು ಕಸಿದುಕೊಂಡಿದೆ. 120 ಜನ ಸತ್ತಿದ್ದಾರೆ. ಇದಕ್ಕೆ ಮೋದಿ ಸರ್ಕಾರವೇ ಹೊಣೆ. ದೇಶ ಎಂದಿಗೂ ಈ ‘ತುಘಲಕ್‌ ಪ್ರಮಾದ’ವನ್ನು ಮರೆಯುವುದಿಲ್ಲ.
-ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.