ಕೇರಳದ ವಯನಾಡ್ ಸಮೀಪದ ಮೆಪ್ಪಾಡಿಯ ಪುತ್ತುಮಲಾದಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಭೂಕುಸಿತದ ನಂತರದ ಭೀಕರ ದೃಶ್ಯ
ರಾಯಿಟರ್ಸ್ ಚಿತ್ರ
ನವದೆಹಲಿ: ಲೋಕಸಭೆ ಕಲಾಪದಲ್ಲಿ ವಯನಾಡ್ ಭೂಕುಸಿತ ವಿಷಯದ ಬಗ್ಗೆ ನಡೆದ ಚರ್ಚೆ ವೇಳೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ಸದಸ್ಯರ ನಡುವೆ ಬುಧವಾರ ವಾಕ್ಸಮರ ನಡೆಯಿತು.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ವಯನಾಡ್ ಕ್ಷೇತ್ರ ಪ್ರತಿನಿಧಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಹುಲ್ ಅವರು ಭೂಕುಸಿತ ವಿಷಯವನ್ನು ಯಾವತ್ತೂ ಪ್ರಸ್ತಾಪಿಸಿರಲಿಲ್ಲ ಎಂದು ಆರೋಪಿಸಿದರು.
ದೇಶದ ವಿವಿಧ ಭಾಗಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದ ಜೀವಹಾನಿ ಹಾಗೂ ಆಸ್ತಿ ನಷ್ಟದ ಬಗ್ಗೆ ಗಮನ ಸೆಳೆಯುವ ನಿಲುವಳಿ ಸೂಚನೆಯಡಿ ಪ್ರಸ್ತಾಪಿಸಿದ ತೇಜಸ್ವಿ ಸೂರ್ಯ, ಕೇರಳ ವಿಪತ್ತು ನಿರ್ವಹಣಾ ಮಂಡಳಿಯ ಶಿಫಾರಸುಗಳ ಹೊರತಾಗಿಯೂ ವಯನಾಡ್‌ನಲ್ಲಿ ಧಾರ್ಮಿಕ ಸಂಸ್ಥೆಗಳ ಒತ್ತಡದಿಂದಾಗಿ ಅಕ್ರಮ ಒತ್ತುವರಿ ತೆರವುಗೊಳಿಸಲು ಸಾಧ್ಯವಾಗಿಲ್ಲ. ಇದನ್ನು ಕೇರಳ ಅರಣ್ಯ ಸಚಿವರೇ ಅಲ್ಲಿನ ವಿಧಾನಸಭೆಯಲ್ಲಿ ಹೇಳಿದ್ದಾರೆ ಎಂದು ಆರೋಪಿಸಿದರು.
ಸೂರ್ಯ ಅವರ ಈ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಇದರಿಂದ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಸಂಜೆ 4 ಗಂಟೆವರೆಗೆ ಮುಂದೂಡಿದರು.
ಮತ್ತೆ ಕಲಾಪ ಆರಂಭವಾಗ ಕಾಂಗ್ರೆಸ್ ಸದಸ್ಯ ಕೆ.ಸಿ. ವೇಣುಗೋಪಾಲ್ ಅವರು, ರಾಹುಲ್ ಗಾಂಧಿ ಅವರು ಪರಿಸರ ಸೂಕ್ಷ್ಮ ವಯನಾಡ್ ವಿಷಯವನ್ನು ಹಲವು ಸಂದರ್ಭಗಳಲ್ಲಿ ಪ್ರಸ್ತಾಪಿಸಿದ್ದಾರೆ. ರಾಹುಲ್ ಈ ವಿಚಾರ ಹಲವು ಬಾರಿ ಪ್ರಸ್ತಾಪಿಸಿರುವುದನ್ನು ಸದನದ ದಾಖಲೆಗಳೇ ಸಾಬೀತುಪಡಿಸುತ್ತವೆ. ತೇಜಸ್ವಿ ಸೂರ್ಯ ಚರ್ಚೆ ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿಯವರ ಬಗ್ಗೆ ಸುಳ್ಳು ಆರೋಪ ಮಾಡಿರುವುದರಿಂದ ಸೂರ್ಯ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಸದನದಲ್ಲಿ ರೈಲ್ವೆ ಸಚಿವಾಲಯಕ್ಕೆ ಅನುದಾನದ ಬೇಡಿಕೆಗಳ ಕುರಿತು ಚರ್ಚೆ ನಡೆಯುತ್ತಿದ್ದಾಗ, ಭೂಕುಸಿತದ ಬಗ್ಗೆ ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಲಾಯಿತು.
ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು, ಸಂಭವನೀಯ ಪ್ರವಾಹ ಮತ್ತು ಭೂಕುಸಿತದ ಬಗ್ಗೆ ಕೇರಳ ಸರ್ಕಾರಕ್ಕೆ ಸಕಾಲಿಕ ಎಚ್ಚರಿಕೆಗಳನ್ನು ನೀಡಲಾಗಿದೆ ಎಂದು ಹೇಳಿದರು.
‘ಕಳೆದ ಹತ್ತು ವರ್ಷಗಳಲ್ಲಿ ವಿಪತ್ತು ನಿರ್ವಹಣೆ ಸುಧಾರಿಸಿದೆ ಮತ್ತು ಜೀವ ಹಾನಿ, ಆಸ್ತಿನಷ್ಟ ತಗ್ಗಿಸಲಾಗಿದೆ’ ಎಂದು ಹೇಳಿದರು.
ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಸಂಸದ ಎನ್.ಕೆ. ಪ್ರೇಮಚಂದ್ರನ್ ಅವರು 2004ರಲ್ಲಿ ಸುನಾಮಿ ಸಂತ್ರಸ್ತರ ಪುನರ್ವಸತಿ ಕ್ರಮಗಳನ್ನು ಉಲ್ಲೇಖಿಸಿ, ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಲು ನಿರ್ದೇಶನ ಕೊಡಿಸಲು ಸ್ಪೀಕರ್‌ಗೆ ಮನವಿ ಮಾಡಿದರು.
2004ರಲ್ಲಿ ಸುನಾಮಿ ಸಂಭವಿಸಿದಾಗ, ಅಂದಿನ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು ಸಂಬಂಧಪಟ್ಟ ರಾಜ್ಯಗಳ ಸಂಸದರ ಮನವಿಯೊಂದಿಗೆ, ಪ್ರತಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 10 ಲಕ್ಷವನ್ನು ನಿರ್ದಿಷ್ಟ ವಿಪತ್ತಿನ ಪುನರ್ವಸತಿ ಮತ್ತು ರಕ್ಷಣಾ ಕ್ರಮಗಳಿಗೆ ಬಳಸಿಕೊಳ್ಳಲು ನಿರ್ದೇಶನ ನೀಡಿದ್ದರು. ಇಂತಹ ನಿರ್ದೇಶನವನ್ನು ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ ನೀಡುವಂತೆ ಸ್ಪೀಕರ್‌ಗೆ ಮನವಿ ಮಾಡುತ್ತೇನೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಸಿಕೊಂಡು ಪುನರ್ವಸತಿ ಮತ್ತು ರಕ್ಷಣಾ ಕ್ರಮ ಕೈಗೊಳ್ಳಬಹುದು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.