ADVERTISEMENT

ಸೆಬಿ ಅಧ್ಯಕ್ಷೆ ಮಾಧವಿ ವಿರುದ್ಧದ ಆರೋಪ: ಸ್ವತಂತ್ರ ತನಿಖೆಗೆ ಕಾಂಗ್ರೆಸ್‌ ಆಗ್ರಹ

ಪಿಟಿಐ
Published 5 ಸೆಪ್ಟೆಂಬರ್ 2024, 14:31 IST
Last Updated 5 ಸೆಪ್ಟೆಂಬರ್ 2024, 14:31 IST
<div class="paragraphs"><p>ಮಾಧವಿ ಪುರಿ ಬುಚ್</p></div>

ಮಾಧವಿ ಪುರಿ ಬುಚ್

   

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧದ ಆರೋಪಗಳ ಕುರಿತ ಸ್ವತಂತ್ರ ತನಿಖೆಗೆ ಕಾಂಗ್ರೆಸ್‌ ಗುರುವಾರ ಒತ್ತಾಯಿಸಿದೆ.

ಸೆಬಿ ಅಧ್ಯಕ್ಷೆ ವಿರುದ್ಧದ ಆರೋಪಗಳು ವಿದೇಶಿ ಹೂಡಿಕೆದಾರರ ಕಳವಳಕ್ಕೆ ಕಾರಣವಾಗಿದ್ದು, ಭಾರತದ ಷೇರು ಮಾರುಕಟ್ಟೆ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದೆ. ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ತನಿಖೆ ಕೈಗೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿದೆ.

ADVERTISEMENT

‘ಅಮೆರಿಕದ ಶಾರ್ಟ್‌ ಸೆಲ್ಲರ್‌ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್‌, ಆಗಸ್ಟ್‌ 10ರಂದು ಸೆಬಿ ಅಧ್ಯಕ್ಷೆ ಮತ್ತು ಅವರ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡಿತ್ತು. ಅದಾನಿ ಸಮೂಹ ವಹಿವಾಟು ನಡೆಸುತ್ತಿದ್ದ ವಿದೇಶಿ ‘ಶೆಲ್‌’ ಕಂಪನಿಗಳಲ್ಲಿ ಮಾಧವಿ ಅವರು ಪಾಲುದಾರಿಕೆ ಹೊಂದಿದ್ದಾರೆ ಎಂದಿತ್ತು. ಅದಕ್ಕೆ ಸಾಕ್ಷ್ಯಾಧಾರಗಳೂ ಇವೆ ಎಂದು ಹೇಳಿತ್ತು. ಸಂಶೋಧನಾ ಸಂಸ್ಥೆಯೊಂದು ಈ ಆರೋಪಗಳನ್ನು ಮಾಡಿದೆಯೇ ಹೊರತು, ಯಾವುದೇ ರಾಜಕೀಯ ಪಕ್ಷ ಮಾಡಿದ್ದಲ್ಲ. ಈ ಆರೋಪಗಳಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ಸಚಿವರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ’ ಎಂದು ಕಾಂಗ್ರೆಸ್‌ನ ವೃತ್ತಿಪರರ ಘಟಕದ ಅಧ್ಯಕ್ಷ ಪ್ರವೀಣ್‌ ಚಕ್ರವರ್ತಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸೆಬಿಯಲ್ಲಿರುವ ವ್ಯಕ್ತಿಯೊಬ್ಬರ ವಿರುದ್ಧ ವಿದೇಶದ ಸಂಸ್ಥೆಯೊಂದು ಆರೋಪಗಳನ್ನು ಮಾಡಿದಾಗ ಸಚಿವರು ಏಕೆ ಪ್ರತಿಕ್ರಿಯಿಸಬೇಕು’ ಎಂದು ಅವರು ಪ್ರಶ್ನಿಸಿದರು.

ಮಾಧವಿ ಅವರು ಸೆಬಿಯ ಪೂರ್ಣಾವಧಿ ಸದಸ್ಯರಾಗಿ ಆಯ್ಕೆಯಾದ ಬಳಿಕವೂ ಐಸಿಐಸಿಐ ಬ್ಯಾಂಕ್‌ನಲ್ಲಿ ಲಾಭದ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದು ಕಾಂಗ್ರೆಸ್‌ ಈಚೆಗೆ ಆರೋಪಿಸಿತ್ತು.

‘ಈ ಬಗ್ಗೆ ಸೆಬಿ ಅಧ್ಯಕ್ಷರು ಯಾವುದೇ ಮಾತನ್ನಾಡುತ್ತಿಲ್ಲ. ಆದರೆ ಐಸಿಐಸಿಐ ಪ್ರತಿಕ್ರಿಯಿಸುತ್ತಿರುವುದು ಏಕೆ?’ ಎಂದು ಚಕ್ರವರ್ತಿ ಹೇಳಿದರು.

ಕಾಂಗ್ರೆಸ್‌ನ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಐಸಿಐಸಿಐ, ‘ಮಾಧವಿ ಅವರು ಸ್ವಯಂ ನಿವೃತ್ತಿ ಹೊಂದಿದ ಬಳಿಕ (2013ರ ಅಕ್ಟೋಬರ್‌ 31) ಐಸಿಐಸಿಐನಿಂದ ವೇತನ ಅಥವಾ ಯಾವುದೇ ಆದಾಯ ಪಡೆದಿಲ್ಲ’ ಎಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.