ADVERTISEMENT

ವಾರಾಣಸಿ| ರಾಹುಲ್‌ ವಿಮಾನ ಇಳಿಯಲು ಸಿಗದ ಅನುಮತಿ: ಆರೋಪ

ಪಿಟಿಐ
Published 14 ಫೆಬ್ರುವರಿ 2023, 11:35 IST
Last Updated 14 ಫೆಬ್ರುವರಿ 2023, 11:35 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ವಾರಾಣಸಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿದ್ದ ವಿಮಾನದ ಭೂಸ್ಪರ್ಶಕ್ಕೆ ವಾರಾಣಸಿ ವಿಮಾನ ನಿಲ್ದಾಣದಲ್ಲಿ ಅನುಮತಿ ನೀಡಲಿಲ್ಲ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ನಿರಾಕರಿಸಿದ್ದಾರೆ.

ಕೇರಳದ ವಯನಾಡಿನಿಂದ ಹೊರಟಿದ್ದ ರಾಹುಲ್‌ ಗಾಂಧಿ ಅವರು ಇಲ್ಲಿನ ಬಾಬತ್‌ ವಿಮಾನ ನಿಲ್ದಾಣದಲ್ಲಿ ಇಳಿಯಲು ವೇಳಾಪಟ್ಟಿ ನಿಗದಿಯಾಗಿತ್ತು ಎಂದು ಕಾಂಗ್ರೆಸ್‌ ಮುಖಂಡ ಅಜಯ್‌ ರೈ ತಿಳಿಸಿದರು.

‘ಅವರನ್ನು ಸ್ವಾಗತಿಸಲು ನಾನು ಮತ್ತು ಪಕ್ಷದ ಇತರ ನಾಯಕರು ಕಾಯುತ್ತಿದ್ದೆವು. ಆದರೆ ರಾಹುಲ್‌ ಅವರ ವಿಮಾನಕ್ಕೆ ಭೂ ಸ್ಪರ್ಶಿಸಲು ಕೊನೆಗಳಿಗೆಯಲ್ಲಿ ಅವಕಾಶ ನಿರಾಕರಿಸಲಾಯಿತು. ಇದರಿಂದ ಅವರ ವಿಮಾನ ದೆಹಲಿಯತ್ತ ಹೊರಟಿತು’ ಎಂದು ಅವರು ದೂರಿದರು.

ADVERTISEMENT

ಈ ಆರೋಪವನ್ನು ಅಲ್ಲಗಳೆದಿರುವ ವಾರಾಣಸಿ ವಿಮಾನ ನಿಲ್ದಾಣದ ನಿರ್ದೇಶಕರಾದ ಆರ್ಯಾಮ ಸನ್ಯಾಲ್‌ ಅವರು, ‘ವಿಮಾನ ನಿಲ್ದಾಣದಲ್ಲಿ ಇಳಿಯುವ ಯೋಜನೆಯನ್ನು ವಿಮಾನಯಾನ ಸಂಸ್ಥೆಯೇ ರದ್ದುಗೊಳಿಸಿದೆ’ ಎಂದು ಹೇಳಿದ್ದಾರೆ.

‘ಎ.ಆರ್‌. ಏರ್‌ವೇಸ್‌ ಸಂಸ್ಥೆಯು ತನ್ನ ವಿಮಾನವು ವಾರಾಣಸಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಯೋಜನೆಯನ್ನು ರದ್ದುಪಡಿಸಿದೆ ಎಂದು ಸೋಮವಾರ ರಾತ್ರಿ 9.16ಕ್ಕೆ ಇ–ಮೇಲ್‌ ಕಳಿಸಿದೆ. ಹೀಗಾಗಿ ನಿಮ್ಮ ಹೇಳಿಕೆಯನ್ನು ಸರಿಪಡಿಸಿಕೊಳ್ಳಿ’ ಎಂದು ವಾರಾಣಸಿಯ ವಿಮಾನ ನಿಲ್ದಾಣ ಟ್ವೀಟ್‌ ಮಾಡಿದೆ.

ಪ್ರಯಾಗ್‌ರಾಜ್‌ನಲ್ಲಿನ ಕಮಲಾ ನೆಹರೂ ಸ್ಮಾರಕ ಆಸ್ಪತ್ರೆಯಲ್ಲಿ ಮಂಗಳವಾರ ನಡೆಯಲಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಬರುವವರಿದ್ದರು ಎಂಧು ಅಜಯ್‌ ರೈ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.