ADVERTISEMENT

ಬಾಂಗ್ಲಾ ಅಲ್ಪಸಂಖ್ಯಾತರ ಪರ ನಿಲ್ಲಿ: ಕೈಚೀಲದಲ್ಲಿ ಕಾಂಗ್ರೆಸ್‌ ಸದಸ್ಯರ ಸಂದೇಶ

ಪಿಟಿಐ
Published 17 ಡಿಸೆಂಬರ್ 2024, 14:08 IST
Last Updated 17 ಡಿಸೆಂಬರ್ 2024, 14:08 IST
ಪ್ರಿಯಾಂಕಾ ಗಾಂಧಿ ವಾದ್ರಾ ಒಳಗೊಂಡಂತೆ ಕಾಂಗ್ರೆಸ್‌ ಸಂಸದರು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ಪ್ರಿಯಾಂಕಾ ಗಾಂಧಿ ವಾದ್ರಾ ಒಳಗೊಂಡಂತೆ ಕಾಂಗ್ರೆಸ್‌ ಸಂಸದರು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಹಿಂದೂಗಳು ಮತ್ತು ಕ್ರೈಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್‌ನ ಹಲವು ಸಂಸದರು ಸಂಸತ್ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪರವಾಗಿ ನಿಲ್ಲಿ’ ಎಂಬ ಬರಹ ಇದ್ದ ಕೈಚೀಲಗಳೊಂದಿಗೆ ಕಾಂಗ್ರೆಸ್‌ ಸದಸ್ಯರು ಸಂಸತ್‌ಗೆ ಬಂದರು. ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಪ್ರಿಯಾಂಕಾ ಗಾಂಧಿ ಅವರು ಹಿಡಿದುಕೊಂಡಿದ್ದ ಕೈಚೀಲದಲ್ಲಿ ‘ಬಾಂಗ್ಲಾದೇಶ ಕೆ ಹಿಂದೂ ಔರ್ ಈಸಾಯಿಯೋಂಕೆ ಸಾಥ್‌ ಖಢೆ ಹೊ’ (ಬಾಂಗ್ಲಾದೇಶದ ಹಿಂದೂಗಳು ಮತ್ತು ಕ್ರೈಸ್ತರ ಪರವಾಗಿ ನಿಲ್ಲಿ) ಎಂದು ಬರೆಯಲಾಗಿತ್ತು. 

ADVERTISEMENT

ಪ್ರಿಯಾಂಕಾ ಅವರು ಸೋಮವಾರ ‘ಪ್ಯಾಲೆಸ್ಟೀನ್‌’ ಎಂದು ಬರೆದಿದ್ದ ಕೈಚೀಲವನ್ನು ಸಂಸತ್ತಿಗೆ ತಂದು ಗಮನ ಸೆಳೆದಿದ್ದರು. ಇಸ್ರೇಲ್‌ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಮೊದಲಿನಿಂದಲೂ ಇಸ್ರೇಲ್‌ ನಡೆಯನ್ನು ಖಂಡಿಸುತ್ತಿರುವ ಅವರು, ಪ್ಯಾಲೆಸ್ಟೀನ್‌ ಜನರಿಗೆ ಬೆಂಬಲ ಸೂಚಿಸಲು ಈ ಹೆಜ್ಜೆಯಿಟ್ಟಿದ್ದರು.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕಾಂಗ್ರೆಸ್‌ನ ಹಲವು ಸಂಸದರು ಸೋಮವಾರ ಕೂಡಾ ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಶೂನ್ಯ ವೇಳೆಯಲ್ಲಿ ಇದೇ ವಿಷಯ ಪ್ರಸ್ತಾಪಿಸಿದ್ದ ಪ್ರಿಯಾಂಕಾ, ಬಾಂಗ್ಲಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರವು ಅಲ್ಲಿನ ಸರ್ಕಾರದ ಜತೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.