ADVERTISEMENT

‘ಕೈ’ ಅಧ್ಯಕ್ಷ ಸ್ಥಾನ: 30ರಂದು ಶಶಿ ತರೂರ್‌ ನಾಮಪತ್ರ ಸಲ್ಲಿಕೆ ?

ಪಿಟಿಐ
Published 25 ಸೆಪ್ಟೆಂಬರ್ 2022, 6:57 IST
Last Updated 25 ಸೆಪ್ಟೆಂಬರ್ 2022, 6:57 IST
ಶಶಿ ತರೂರ್‌
ಶಶಿ ತರೂರ್‌   

ನವದೆಹಲಿ: ಹಿರಿಯ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರು ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಇದೇ 30ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತರೂರ್ ಅವರ ಸಹಾಯಕ ಆಲಿಂ ಜವೇರಿ ಅವರು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯ ಅಧ್ಯಕ್ಷ ಮಧುಸೂದನ್‌ ಮಿಸ್ತ್ರಿ ಅವರ ಕಚೇರಿಗೆ ಹೋಗಿ ಅರ್ಜಿಗಳನ್ನು ಪಡೆದಿದ್ದಾರೆ.

10 ಪ್ರದೇಶ ಕಾಂಗ್ರೆಸ್‌ ಸಮಿತಿಗಳ ಪ್ರತಿನಿಧಿಗಳು ಅಭ್ಯರ್ಥಿಯನ್ನು ಅನುಮೋದಿಸಿ ಸಹಿ ಹಾಕಬೇಕಾಗುತ್ತದೆ. ಈ ಕಾರ್ಯಕ್ಕಾಗಿ ತರೂರ್‌ ಅವರಿಗೆ ಕೆಲ ದಿನಗಳು ಬೇಕಾಗುವುದರಿಂದ ಅವರು ಇದೇ 30ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಎರಡು ದಶಕಗಳ ಬಳಿಕ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಯುತ್ತಿದೆ. ಈಗಾಗಲೇ ತಾವು ಸ್ಪರ್ಧಿಸುವುದಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹಲೋತ್‌ ಹೇಳಿದ್ದಾರೆ. ಗೆಹಲೋತ್‌ ಮತ್ತು ತರೂರ್‌ ಅವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ಕೊನೆಯದಾಗಿ ನವೆಂಬರ್ 2000ರಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯನ್ನು ಕಂಡಿತ್ತು. ಜಿತೇಂದ್ರ ಪ್ರಸಾದ್‌ ಅವರು 2000ರಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಸೋತಿದ್ದರು. ಅದಕ್ಕೂ ಮೊದಲು, ಸೀತಾರಾಮ್ ಕೇಸರಿ ಅವರು 1997ರಲ್ಲಿ ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ ಅವರನ್ನು ಸೋಲಿಸಿದ್ದರು.

ಧ್ವನಿ ಎತ್ತದಿರಿ:ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಹೋದ್ಯೋಗಿಗಳ ವಿರುದ್ಧ ಪಕ್ಷದ ಯಾವುದೇ ನಾಯಕರು ಧ್ವನಿ ಎತ್ತಬಾರದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಶನಿವಾರ ಆಗ್ರಹಿಸಿದರು.

‘ನಾವು ಯಾವಾಗಲೂ ಮುಕ್ತ ಮತ್ತು ನ್ಯಾಯಸಮ್ಮತ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಅವರೂ ಇದೇ ರೀತಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.