ADVERTISEMENT

ವಿಡಿಯೊ | ವಲಸಿಗರೊಂದಿಗೆ ರಾಹುಲ್ ಸಂವಾದ: ಸಾಕ್ಷ್ಯಚಿತ್ರ ಬಿಡುಗಡೆ

Cong releases documentary on Rahul's interaction with migrants

ಪಿಟಿಐ
Published 23 ಮೇ 2020, 18:49 IST
Last Updated 23 ಮೇ 2020, 18:49 IST
ಲಾಕ್‌ಡೌನ್ ನಡುವೆ ಕಳೆದ ಶನಿವಾರ ವದೆಹಲಿಯ ಸುಖ್‌ದೇವ್ ವಿಹಾರ್ ಮೇಲ್ಸೇತುವೆ ಬಳಿ ತಮ್ಮೂರಿಗೆ ತೆರಳಲು ಕುಳಿತಿದ್ದ ವಲಸೆ ಕಾರ್ಮಿಕರೊಂದಿಗೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಂವಾದ ನಡೆಸುತ್ತಿರುವ ದೃಶ್ಯ –ಪಿಟಿಐ ಚಿತ್ರ 
ಲಾಕ್‌ಡೌನ್ ನಡುವೆ ಕಳೆದ ಶನಿವಾರ ವದೆಹಲಿಯ ಸುಖ್‌ದೇವ್ ವಿಹಾರ್ ಮೇಲ್ಸೇತುವೆ ಬಳಿ ತಮ್ಮೂರಿಗೆ ತೆರಳಲು ಕುಳಿತಿದ್ದ ವಲಸೆ ಕಾರ್ಮಿಕರೊಂದಿಗೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಂವಾದ ನಡೆಸುತ್ತಿರುವ ದೃಶ್ಯ –ಪಿಟಿಐ ಚಿತ್ರ    

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಳೆದ ವಾರ ವಲಸೆ ಕಾರ್ಮಿಕರೊಂದಿಗೆ ನಡೆಸಿದ್ದ ಸಂವಾದ ಕುರಿತ ಸಾಕ್ಷ್ಯಚಿತ್ರವನ್ನು ಶನಿವಾರ ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಕಳೆದ ಶನಿವಾರ ನವದೆಹಲಿಯ ಸುಖ್‌ದೇವ್ ವಿಹಾರ್ ಮೇಲ್ಸೆತುವೆ ಬಳಿ ಕಾಲ್ನಡಿಗೆಯಲ್ಲಿ ಹೊರಟಿದ್ದ ವಲಸೆ ಕಾರ್ಮಿಕರ ಗುಂಪಿನೊಂದಿಗೆ ಸಂವಾದ ನಡೆಸಿದ್ದ ರಾಹುಲ್, ಅವರ ಸಂಕಷ್ಟವನ್ನು ಆಲಿಸಿದ್ದರು.

ಒಟ್ಟು 16 ನಿಮಿಷಗಳ ಈ ಸಾಕ್ಷ್ಯಚಿತ್ರವು, ಜೀವನೋಪಾಯಕ್ಕಾಗಿ ನಗರಕ್ಕೆ ವಲಸೆ ಬಂದಿದ್ದ ಕಾರ್ಮಿಕರ ಕುಟುಂಬಗಳು ಲಾಕ್‌ಡೌನ್ ಸಮಯದಲ್ಲಿ ಎದುರಿಸಿದ ಸಂಕಷ್ಟಗಳನ್ನು ಹಿಡಿದಿಟ್ಟಿದೆ.

ADVERTISEMENT

ಲಾಕ್‌ಡೌನ್‌ನಿಂದ ನಿರ್ಗತಿಕರಾದ 13 ಕೋಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮೂಲಕಸರ್ಕಾರ ಕೂಡಲೇ ₹7,500 ನೀಡಬೇಕು ಎಂದು ಸಾಕ್ಷ್ಯಚಿತ್ರದ ಅಂತಿಮ ಭಾಗದಲ್ಲಿ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಕಪ್ಪುಪ್ಯಾಂಟ್ ಮತ್ತು ಬಿಳಿ ಕುರ್ತಾ ಧರಿಸಿರುವರಾಹುಲ್, ವಲಸೆ ಕಾರ್ಮಿಕರಿರುವ ಪಾದಚಾರಿ ಮಾರ್ಗದಲ್ಲೇ ಕುಳಿತು ಅವರ ಕಷ್ಟಗಳನ್ನು ಆಲಿಸಿ, ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಕುರಿತು ಭರವಸೆ ನೀಡಿದ್ದಾರೆ.

ಅಂಬಾಲದಿಂದ ಝಾನ್ಸಿ ಜಿಲ್ಲೆಯ ತಮ್ಮ ಊರಿಗೆ ಹಿಂತಿರುಗುತ್ತಿರುವ ಮಹಿಳೆ, ಮಕ್ಕಳು ಸೇರಿದಂತೆ ಸುಮಾರು 20 ವಲಸೆ ಕಾರ್ಮಿಕರ ಗುಂಪನ್ನು ಮಾತನಾಡಿಸುವ ರಾಹುಲ್, ದಿಢೀರ್ ಲಾಕ್‌ಡೌನ್‌ ಮತ್ತು ಅದರಿಂದ ಅವರ ಜೀವನದ ಮೇಲಾದ ಪರಿಣಾಮ, ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ಕಾರ್ಮಿಕರಿಗೆ ಸಹಾಯ ಮಾಡುವ ಭರವಸೆ ನೀಡುವ ಅವರು, ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ವ್ಯಾನ್ ಮತ್ತು ಕಾರುಗಳನ್ನು ವ್ಯವಸ್ಥೆ ಮಾಡುವ ದೃಶ್ಯಗಳೂ ಈ ಸಾಕ್ಷ್ಯಚಿತ್ರದಲ್ಲಿದೆ.

ಸಾಕ್ಷ್ಯಚಿತ್ರದ ಅಂತಿಮ ಭಾಗದಲ್ಲಿ ‘ನನ್ನ ವಲಸೆ ಕಾರ್ಮಿಕ ಸಹೋದರ, ಸಹೋದರಿಯರೇ.. ನೀವೇ ಈ ದೇಶದ ಶಕ್ತಿ’ ಎನ್ನುವ ರಾಹುಲ್ ಅವರ ಧ್ವನಿಮುದ್ರಿತ ಸಂದೇಶವಿದೆ. ‘ಇಡೀ ದೇಶದ ಸಂಪೂರ್ಣ ಹೊಣೆಯನ್ನು ನಿಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದೀರಿ. ನಿಮಗೆ ನ್ಯಾಯ ದೊರೆಕಬೇಕೆಂದುಇಡೀ ದೇಶ ಬಯಸುತ್ತದೆ. ದೇಶದ ಈ ಶಕ್ತಿಯನ್ನು ಬಲಪಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.