ADVERTISEMENT

ಪುಟಿನ್‌ಗೆ ಔತಣಕೂಟ: ವಿರೋಧ ಪಕ್ಷದ ನಾಯಕರಿಗಿಲ್ಲ ಆಹ್ವಾನ

ಪಿಟಿಐ
Published 5 ಡಿಸೆಂಬರ್ 2025, 16:05 IST
Last Updated 5 ಡಿಸೆಂಬರ್ 2025, 16:05 IST
   

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ನೀಡಿದ್ದ ಔತಣಕೂಟಕ್ಕೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಅವರನ್ನು ಆಹ್ವಾನಿಸದ ಕಾರಣಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ. 

ಅಲ್ಲದೆ, ಔತಣಕೂಟಕ್ಕೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರನ್ನು ಆಹ್ವಾನಿಸಿದ ಸರ್ಕಾರದ ನಡೆಯನ್ನು ಖಂಡಿಸಿರುವ ಕಾಂಗ್ರೆಸ್‌, ಆಹ್ವಾನ ಸ್ವೀಕರಿಸಿದ ತೂರೂರ್‌ ಅವರನ್ನೂ ಟೀಕಿಸಿದೆ.

‘ಕೇಂದ್ರ ಸರ್ಕಾರ ನಿತ್ಯ ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿದೆ. ಈ ಮೂಲಕ ಅದು ಪ್ರಜಾಪ್ರಭುತ್ವ ತತ್ವಗಳಲ್ಲಿ ನಂಬಿಕೆ ಹೊಂದಿಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದೆ’ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಆರೋಪಿಸಿದರು.

ADVERTISEMENT

ಸಂಸದ ಶಶಿ ತರೂರ್‌ ಅವರನ್ನು ಆಹ್ವಾನಿಸಿರುವ ಕುರಿತು ಕೇಳಿದ ಪ್ರಶ್ನೆಗೆ, ‘ಅದಕ್ಕೆ ತರೂರ್‌ ಅವರ ಬಳಿಯೇ ಕೇಳಿ. ಪಕ್ಷದ ಹಿರಿಯ ನಾಯಕರಿಗೆ ಆಹ್ವಾನ ಬರದೆ, ಇತರರಿಗೆ ಆಹ್ವಾನ ಬಂದಿದೆ ಎಂದರೆ, ಅಂಥವರು ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು.  ಸರ್ಕಾರ ಆಹ್ವಾನಿಸುವ ವಿಚಾರದಲ್ಲಿ ರಾಜಕೀಯ ಮಾಡಿರುವುದು ಸ್ಪಷ್ಟವಾಗಿದೆ. ಅದು ಪ್ರಶ್ನಾರ್ಹವಾಗಿದೆ ಮತ್ತು ಅಂಥ ಆಹ್ವಾನವನ್ನು ಸ್ವೀಕರಿಸುವುದೂ ಪ್ರಶ್ನಾರ್ಹವಾಗಿದೆ’ ಎಂದು ಖೇರಾ ಟೀಕಿಸಿದರು.

‘ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷರನ್ನು ನಿಯಮಿತವಾಗಿ ಆಹ್ವಾನಿಸಲಾಗುತ್ತಿತ್ತು. ಆದರೆ ಕೆಲ ವರ್ಷಗಳಿಂದ ಈ ಪದ್ಧತಿ ನಿಂತಿತ್ತು. ಈಗ ಪುನರಾರಂಭವಾಗಿದೆ. ನಾನು ಆಹ್ವಾನವನ್ನು ಸ್ವೀಕರಿಸಿದ್ದು, ಹಾಜರಾಗುತ್ತೇನೆ’ ಎಂದು ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಶಶಿ ತರೂರ್‌ ‍ಪ್ರತಿಕ್ರಿಯಿಸಿದರು.

‘ವಿರೋಧ ಪಕ್ಷದ ನಾಯಕರನ್ನು ಏಕೆ ಕರೆದಿಲ್ಲ ಎಂಬುದು ನನಗೆ ಗೊತ್ತಿಲ್ಲ. ಸಂಪ್ರದಾಯ ಪಾಲನೆ ಆಗಬೇಕು. ಹಿಂದೆಲ್ಲ ವಿರೋಧ ಪಕ್ಷದ ನಾಯಕರ ಜತೆಗೆ ವಿವಿಧ ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗುತ್ತಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.