ADVERTISEMENT

ರಾಹುಲ್ ಗಾಂಧಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ: ಕಾಂಗ್ರೆಸ್ ಹರ್ಷ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 0:25 IST
Last Updated 5 ಆಗಸ್ಟ್ 2023, 0:25 IST
   

ಬೆಂಗಳೂರು: ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿರುವುದಕ್ಕೆ ಪಕ್ಷದ ರಾಜ್ಯ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. ‘ಇದು ಪ್ರಜಾಪ್ರಭುತ್ವದ ಗೆಲುವು’ ಎಂದು ಬಣ್ಣಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸುಪ್ರೀಂ ಕೋರ್ಟ್‌ನಿಂದ ರಾಹುಲ್‌ ಗಾಂಧಿಯವರಿಗೆ ನ್ಯಾಯ ದೊರಕಿದೆ. ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕಿರುವ ಜಯ. ನೆಲದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಆ ಕೆಲಸವನ್ನು ಸುಪ್ರೀಂ ಕೋರ್ಟ್‌ ಮಾಡಿದೆ’ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಸುಪ್ರೀಂ ಕೋರ್ಟ್‌ನ ಆದೇಶವು ನೈತಿಕತೆಯ ಗೆಲವು ಮಾತ್ರ ಅಲ್ಲ, ರಾಹುಲ್‌ ಗಾಂಧಿಯವರ ಶಕ್ತಿ ಕುಗ್ಗಿಸಲು ಯತ್ನಿಸಿದ ಆಡಳಿತ ಪಕ್ಷದ ವಿರುದ್ಧದ ಕಾನೂನಾತ್ಮ ಮತ್ತು ರಾಜಕೀಯ ಗೆಲುವು ಕೂಡ ಹೌದು. ರಾಜಕೀಯ ದ್ವೇಷದ ಕ್ರಮವನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ’ ಎಂದಿದ್ದಾರೆ.

ADVERTISEMENT

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಕೂಡ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ‘ದ್ವೇಷದ ರಾಜಕಾರಣ ಯಾವತ್ತೂ ಗೆಲ್ಲುವುದಿಲ್ಲ. ಈ ಆದೇಶದಿಂದಾಗಿ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಮತ್ತಷ್ಟು ಬಲಗೊಳ್ಳಲಿದೆ’ ಎಂದು ಹೇಳಿದ್ದಾರೆ.

ನ್ಯಾಯಾಲಯದ ಆದೇಶದ ಕುರಿತು ಪ್ರತಿಕ್ರಿಯಿಸಿದ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ‘ದ್ವೇಷದ ರಾಜಕಾರಣದಿಂದ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿತ್ತು. ಬಿಜೆಪಿಯ ಸುಳ್ಳಿನ ಸಿದ್ಧಾಂತದ ರಾಜಕೀಯಕ್ಕೆ ಈಗ ಸೋಲಾಗಿದೆ. ಗುಜರಾತ್‌ ಮಾದರಿ ವಿಫಲವಾಗಿದೆ’ ಎಂದರು.

‘ಗುಜರಾತ್‌ ನ್ಯಾಯಾಲಯದ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಸತ್ಯಕ್ಕೆ ಗೆಲುವು ಖಚಿತ ಎಂಬುದು ಇದರಿಂದ ಸಾಬೀತಾಗಿದೆ. ರಾಜಕೀಯ ದ್ವೇಷದಿಂದ ರಾಹುಲ್‌ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದವರಿಗೆ ಹಿನ್ನಡೆಯಾಗಿದೆ’ ಎಂದು ವಸತಿ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್ ಖಾನ್‌ ಪ್ರತಿಕ್ರಿಯಿಸಿದ್ದಾರೆ.

****

ರಾಹುಲ್‌ ಗಾಂಧಿ ವಿರುದ್ಧದ ನ್ಯಾಯಸಮ್ಮತವಲ್ಲದ ಮಾನನಷ್ಟ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲಿನ ಜನರ ನಂಬಿಕೆಯನ್ನು ಈ ತೀರ್ಪು ಬಲಪಡಿಸಿದೆ. ರಾಹುಲ್‌ ಮತ್ತು ವಯನಾಡು ಜನತೆಗೆ ಅಭಿನಂದನೆ.

-ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

****

ರಾಹುಲ್‌ ಗಾಂಧಿ ಸಂಸತ್‌ ಸದಸ್ಯತ್ವಕ್ಕೆ ಸಂಬಂಧಿಸಿದ ಸುದ್ದಿ ಕೇಳಿ ಖುಷಿಯಾಗಿದೆ. ಮಾತೃಭೂಮಿಗಾಗಿ ಒಟ್ಟಾಗಿ ಹೋರಾಡುವ ಮತ್ತು ಜಯ ಸಾಧಿಸುವ ‘ಇಂಡಿಯಾ’ದ ಸಂಕಲ್ಪಕ್ಕೆ ಬಲ ಸಿಕ್ಕಿದೆ. ಇದು ನ್ಯಾಯಾಂಗದ ಗೆಲುವು.

-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ

****

ಸೂರ್ಯ, ಚಂದ್ರ ಮತ್ತು ಸತ್ಯ... ಈ ಮೂರು ವಿಷಯಗಳನ್ನು ತುಂಬಾ ದಿನ ಅದುಮಿಡಲು ಸಾಧ್ಯವಿಲ್ಲ– ಗೌತಮ ಬುದ್ಧ; ನ್ಯಾಯಯುತ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯಕ್ಕೆ ಧನ್ಯವಾದಗಳು. ಸತ್ಯಮೇವ ಜಯತೇ.

-ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

****

ನ್ಯಾಯಾಂಗ ಮೇಲುಗೈ ಸಾಧಿಸಿದೆ. ರಾಹುಲ್‌ ಗಾಂಧಿಯವರನ್ನು ವಯನಾಡು ಉಳಿಸಿಕೊಂಡಿದೆ. ಸೋದರ ರಾಹುಲ್‌ಗೆ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್‌ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಈ ತೀರ್ಪು ನ್ಯಾಯಾಂಗದ ಶಕ್ತಿಯ ಮೇಲಿನ ನಮ್ಮ ನಂಬಿಕೆಯನ್ನು ಮತ್ತೆ ದೃಢಪಡಿಸಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸಬೇಕಾದ ಅಗತ್ಯವನ್ನು ಸಾರಿದೆ.

-ಎಂ.ಕೆ ಸ್ಟಾಲಿನ್‌, ತಮಿಳುನಾಡು ಮುಖ್ಯಮಂತ್ರಿ

****

ಬಿಜೆಪಿ ಮತ್ತು ಅದರ ಹಿಂಬಾಲಕರಿಗೆ ಇದೊಂದು ಪಾಠವಾಗಲಿ. ನೀವು ಸಂಪೂರ್ಣ ಕೆಟ್ಟದ್ದನ್ನೇ ಮಾಡುತ್ತಿದ್ದರೂ, ನಾವು ಹಿಂದೆ ಸರಿಯುವುದಿಲ್ಲ. ಸರ್ಕಾರವಾಗಿ ಮತ್ತು ಪಕ್ಷವಾಗಿ ನಿಮ್ಮ ವೈಫಲ್ಯಗಳನ್ನು ಜಗತ್ತಿಗೆ ಹೇಳುತ್ತೇವೆ. ಸಾಂವಿಧಾನಿಕ ಆದರ್ಶಗಳನ್ನು ಎತ್ತಿಹಿಡಿಯುವ ಕಾರ್ಯ ಮುಂದುವರಿಸುತ್ತೇವೆ. ನೀವು ನಾಶಮಾಡುತ್ತಿರುವ ಸಂಸ್ಥೆಗಳ ಮೇಲಿನ ನಮ್ಮ ನಂಬಿಕೆ ಬಲವಾಗಲಿದೆ. ಸತ್ಯಮೇವ ಜಯತೇ!"

-ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

****

ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ನ್ಯಾಯಕ್ಕೆ ಜಯವಾಗಿದೆ. ಜನರ ಧ್ವನಿ ಅಡಗಿಸಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ.

-ಕೆ.ಸಿ ವೇಣುಗೋಪಾಲ್‌, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

****

ಇದು ದ್ವೇಷದ ವಿರುದ್ಧ ಪ್ರೀತಿಗೆ ಸಿಕ್ಕ ಗೆಲುವು.
ಸತ್ಯಮೇವ ಜಯತೇ. ಜೈಹಿಂದ್‌

-ಕಾಂಗ್ರೆಸ್‌ ಟ್ವೀಟ್‌

****

ಸುಪ್ರೀಂ ಕೋರ್ಟ್‌ನ ಆದೇಶವನ್ನು ಗೌರವಿಸುತ್ತೇವೆ. ಆದರೆ, ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ.

-ಪೂರ್ಣೇಶ್‌ ಮೋದಿ (ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದ ಗುಜರಾತ್‌ ಬಿಜೆಪಿ ಶಾಸಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.