ADVERTISEMENT

ಸ್ವಾಗತಕಾರಿಣಿ ಕೊಲೆ| ಕೀಚಕ, ದುಶ್ಯಾಸನರೇ ಬಿಜೆಪಿಗೆ ಆದರ್ಶ ಎಂದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 7:40 IST
Last Updated 25 ಸೆಪ್ಟೆಂಬರ್ 2022, 7:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಉತ್ತರಾಖಂಡದಲ್ಲಿ ಬಿಜೆಪಿ ನಾಯಕರೊಬ್ಬರ ಮಗ ತನ್ನ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ವಾಗತಕಾರಿಣಿ ಅಂಕಿತ ಭಂಡಾರಿ ಎಂಬುವವರ ಕೊಲೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವುದನ್ನು ಕಾಂಗ್ರೆಸ್‌ ಕಟು ಶಬ್ದಗಳಿಂದ ಟೀಕಿಸಿದೆ.

‘ಕೊಲೆಗಡುಕರು, ಅತ್ಯಾಚಾರಿಗಳು, ಭ್ರಷ್ಟರು ಸೇರಿಕೊಂಡಿರುವ ಕೂಟಕ್ಕೆ ಇರುವ ಹೆಸರೇ ಬಿಜೆಪಿ‘ ಎಂದು ಕರ್ನಾಟಕ ಕಾಂಗ್ರೆಸ್‌ನ ಟ್ವಿಟರ್‌ ಖಾತೆಯಿಂದ ಮಾಡಲಾದ ಟ್ವೀಟ್‌ನಲ್ಲಿ ಹೇಳಲಾಗಿದೆ.

‘ಬೇಟಿ ಬಚಾವ್ ಆಗಬೇಕಿರುವುದು ಬಿಜೆಪಿಗರಿಂದ ಎಂಬುದು ಕರ್ನಾಟಕದಿಂದ, ಉತ್ತರ ಪ್ರದೇಶ, ಉತ್ತರಖಾಂಡದವರೆಗೂ ಬಿಜೆಪಿಗರು ನಿರೂಪಿಸಿದ್ದಾರೆ. ಹಣ್ಣುಮಕ್ಕಳನ್ನು ಪೀಡಿಸುವ ಬಿಜೆಪಿಗೆ ಕೀಚಕ, ದುಶ್ಯಾಸನರು ಆದರ್ಶ ಪುರುಷರೇ ಹೊರತು ರಾಮನಲ್ಲ’ ಎಂದು ಕಾಂಗ್ರೆಸ್‌ ಗೇಲಿ ಮಾಡಿದೆ.

ADVERTISEMENT

ರೆಸಾರ್ಟ್ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಹತ್ಯೆ ಆರೋಪದಲ್ಲಿ ಹರಿದ್ವಾರ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಮಗ ಪುಳಕಿತ್ ಆರ್ಯ ಸೇರಿದಂತೆ ಮೂವರನ್ನು ಉತ್ತರಾಖಂಡ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಪುಳಕಿತ್ ಆರ್ಯ ಅವರ ಮಾಲೀಕತ್ವದ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಅವರ ಮೃತದೇಹವು ಚೀಲ ಎಂಬ ಕಾಲುವೆಯೊಂದರಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಕಾಲುವೆಗೆ ಎಸೆದಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೌಡೀ ಎಎಸ್‌ಪಿ ಶೇಖರ್ ಚಂದ್ರ ಸೂಯಲ್ ಮಾಹಿತಿ ನೀಡಿದ್ದಾರೆ.

ಅತಿಥಿಗಳೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪದ ಕಾರಣಕ್ಕಾಗಿ ಅಂಕಿತಾಳನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹಿಂದೆ ಹೇಳಿದ್ದರು.

ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭ್ಯವಾಗಿದ್ದು, 19 ವರ್ಷದ ಅಂಕಿತಾಳನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ರಿಷಿಕೇಶದ ‘ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‘ ಬಿಡುಗಡೆ ಮಾಡಿದ ಕರಡು ವರದಿಯಲ್ಲಿ ಅಂಕಿತಾ ಭಂಡಾರಿಯವರ ದೇಹದಲ್ಲಿ ‘ಆಂಟಿಮಾರ್ಟಮ್ ಗಾಯ’ಗಳು (ಸಾವಿಗೂ ಹಿಂದೆ ಆದ ಗಾಯಗಳು) ಕಂಡುಬಂದಿವೆ. ಇವು ಮೊಂಡಾದ ವಸ್ತುವಿನಿಂದಾದ ಗಾಯಗಳು. ಆದರೂ ಆಕೆಯನ್ನು ನೀರಲ್ಲಿ ಮುಳುಗಿಸಿ ಸಾಯಿಸಲಾಗಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.