ADVERTISEMENT

ಉತ್ತರಾಖಂಡ ವಿಧಾನಸಭೆ ಚುನಾವಣೆ: ‘ಕೈ‘, ‘ಕಮಲ’ಕ್ಕೆ ಬಂಡಾಯದ ಸವಾಲು

ಪಿಟಿಐ
Published 27 ಜನವರಿ 2022, 19:36 IST
Last Updated 27 ಜನವರಿ 2022, 19:36 IST
   

ಡೆಹ್ರಾಡೂನ್‌: ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರಾಖಂಡದಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳೆರಡಕ್ಕೂ ಒಂದೇ ರೀತಿಯಲ್ಲಿ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್‌ ಕೈತಪ್ಪಿರುವ ಮುಖಂಡರು ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ದೊಡ್ಡ ಸವಾಲಾಗಿದ್ದಾರೆ. ಎರಡೂ ಪಕ್ಷಗಳು ಬಂಡಾಯ ಶಮನದತ್ತ ದೃಷ್ಟಿ ನೆಟ್ಟಿವೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ ಅವರು ಸ್ಪರ್ಧಿಸುವ ಕ್ಷೇತ್ರವನ್ನು ರಾಮನಗರದಿಂದ ಲಲ್ಕುವನ್‌ಗೆ ಬದಲಿಸಿದ್ದು ಕೂಡ ಬಂಡಾಯ ಶಮನದ ಭಾಗ ಎನ್ನಲಾಗಿದೆ.

ಕಾಂಗ್ರೆಸ್‌ ಕಾರ್ಯಾಧ್ಯಕ್ಷ ರಂಜಿತ್‌ ರಾವತ್‌ ಅವರಿಗೂ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಲು ಉಮೇದು ಇತ್ತು. ಹಾಗಾಗಿಯೇ ಹರೀಶ್‌ ರಾವತ್‌ ಅವರ ಕ್ಷೇತ್ರ ಬದಲಿಸಲಾಗಿದೆ. ಹಾಗಿದ್ದರೂ ಈ ಕ್ಷೇತ್ರದಿಂದ ರಂಜಿತ್‌ ಅವರಿಗೆ ಟಿಕೆಟ್‌ ನೀಡಲಾಗಿಲ್ಲ. ಬದಲಿಗೆ, ಸಾಲ್ಟ್‌ ಕ್ಷೇತ್ರದಿಂದ ರಂಜಿತ್‌ ಅವರನ್ನು ಕಣಕ್ಕೆ ಇಳಿಸಲಾಗಿದೆ.

ADVERTISEMENT

ಲಲ್ಕುವನ್‌ ಕ್ಷೇತ್ರದಿಂದ ಸಂಧ್ಯಾ ದಲಕೋಟಿ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಅಭ್ಯರ್ಥಿಯಾಗಿ ಅವರೇ ಮುಂದುವರಿದರೆ, ಪಕ್ಷ ತೊರೆಯುವುದಾಗಿ ಮಾಜಿ ಸಚಿವ ಹರೀಶ್‌ ಚಂದ್ರ ದುರ್ಗಪಾಲ್‌ ಬೆದರಿಕೆ ಹಾಕಿದ್ದರು. ಅಭ್ಯರ್ಥಿ ಬದಲಾವಣೆ ಬಳಿಕ ದುರ್ಗಪಾಲ್‌ ಅವರಿಗೆ ಸಮಾಧಾನವಾಗಿದೆ. ಪಕ್ಷದಲ್ಲಿಯೇ ಉಳಿದು ಹರೀಶ್‌ ರಾವತ್‌ ಅವರ ಗೆಲುವಿಗೆ ಕೆಲಸ ಮಾಡುವುದಾಗಿ ದುರ್ಗಪಾಲ್‌ ಹೇಳಿದ್ದಾರೆ.

ಮುಖಂಡರ ಅಸಮಾಧಾನ ತಣಿಸುವುದಕ್ಕಾಗಿ ಇನ್ನೂ ಇಬ್ಬರು ಅಭ್ಯರ್ಥಿಗಳ ಕ್ಷೇತ್ರಗಳನ್ನು ಕಾಂಗ್ರೆಸ್‌ ಬದಲಾಯಿಸಿದೆ. ದೊಯಿವಾಲಾ ಕ್ಷೇತ್ರದ ಅಭ್ಯರ್ಥಿ ಮೋಹಿತ್‌ ಉನಿಯಾಲ್‌ ಬದಲಿಗೆ ಗೌರವ್‌ ಚೌಧರಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಹಾಗೆಯೇ, ಜ್ವಾಲಾಪುರದಿಂದ ಬರ್ಖಾ ರಾಣಿ ಬದಲಿಗೆ ರವಿ ಬಹದೂರ್ ಅವರನ್ನು ಕಣಕ್ಕೆ ಇಳಿಸಲಾಗಿದೆ.

‘ಅತೃಪ್ತ’ ಮುಖಂಡರನ್ನು ಸಮಾಧಾನಗೊಳಿಸುವ ಪ್ರಯತವನ್ನು ಬಿಜೆಪಿ ಕೂಡ ತೀವ್ರಗೊಳಿಸಿದೆ.

ತಾವು ಪ್ರತಿನಿಧಿಸುತ್ತಿರುವ ಅಲ್ಮೋರಾ ಕ್ಷೇತ್ರದಿಂದ ಕೈಲಾಸ್‌ ಶರ್ಮಾ ಅವರನ್ನು ಕಣಕ್ಕೆ ಇಳಿಸುವ ಬಿಜೆಪಿ ನಿರ್ಧಾರವನ್ನು ಉಪಸ್ಪೀಕರ್‌ ರಘುನಾಥ್‌ ಸಿಂಗ್‌ ಚೌಹಾಣ್ ಖಂಡಿಸಿದ್ದರು. ಶರ್ಮಾ ಅವರಿಗೆ ಟಿಕೆಟ್‌ ಕೊಟ್ಟರೆ ಪಕ್ಷ ತೊರೆದು, ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ, ಹಿರಿಯ ಮುಖಂಡರ ಜತೆಗಿನ ಚರ್ಚೆಯ ಬಳಿಕ ಚೌಹಾಣ್‌ ಅವರು ತಮ್ಮ ನಿಲುವು ಬದಲಿಸಿದ್ದಾರೆ. 40 ವರ್ಷಗಳಿಂದ ಬಿಜೆಪಿಯಲ್ಲಿ ಇದ್ದು, ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

ಭೋಪಾಲ್‌ರಾಮ್‌ ಟಮ್ಟ ಅವರಿಗೆ ಟಿಕೆಟ್‌ ನೀಡಿದ್ದರ ವಿರುದ್ಧ ತರಳಿ ಶಾಸಕ ಮುನ್ನಿ ದೇವಿ ಶಾ ಮುನಿಸಿಕೊಂಡಿದ್ದರು. ಅವರ ಮನ ಒಲಿಸುವಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್‌ ಧಾಮಿ ಯಶಸ್ವಿ ಆಗಿದ್ದಾರೆ.

ಶಾಸಕ ರುದ್ರಪುರ ರಾಜ್‌ಕುಮಾರ್‌ ತುಕ್ರಲ್ ಅವರು ಟಿಕೆಟ್‌ ನಿರಾಕರಿಸಿದ ಕಾರಣಕ್ಕೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಝಬ್ರೇಡ ಕ್ಷೇತ್ರದ ಶಾಸಕ ದೇಶರಾಜ್‌ ಕರ್ನವಾಲ್‌ ಅವರಿಗೂ ಟಿಕೆಟ್‌ ನಿರಾಕರಿಸಲಾಗಿದ್ದು, ಅತೃಪ್ತರಾಗಿದ್ದಾರೆ. ಆದರೆ, ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ದೇವೇಂದ್ರ ಭಾಸಿನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.