ರಾಯಪುರ (ಛತ್ತೀಸಗಢ): ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಬಂಧಿಸಿದೆ. ತನಿಖಾ ಸಂಸ್ಥೆಯ ಕ್ರಮವನ್ನು ಖಂಡಿಸಿದ ಕಾಂಗ್ರೆಸ್ ಶಾಸಕರು ವಿಧಾನಸಭೆಯ ಕಲಾಪವನ್ನು ಬಹಿಷ್ಕರಿಸಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆ ಪ್ರತಿಪಕ್ಷಗಳಿಗೆ ಕಿರುಕುಳ ನೀಡಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಚೈತನ್ಯ ಬಘೇಲ್ ಅವರನ್ನು ಇ.ಡಿ ಬಂಧಿಸಿದೆ. ಇದಕ್ಕೂ ಮುನ್ನ ಚೈತನ್ಯ ಹಾಗೂ ಅವರ ತಂದೆ(ಭೂಪೇಶ್ ಬಘೇಲ್) ವಾಸವಿರುವ ಭಿಲಾಯಿ ಪಟ್ಟಣದ ಮನೆಯಲ್ಲಿ ಇ.ಡಿ ಶೋಧ ನಡೆಸಿತ್ತು.
ಸದನದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಚರಣ್ ದಾಸ್ ಮಹಂತ್, ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪ್ರಶ್ನಿಸಿದರು. ಜಾರಿ ನಿರ್ದೇಶನಾಲಯ ನಮ್ಮ ಮೇಲೆ ಒತ್ತಡ ಹೇರುವುದಲ್ಲದೇ, ನಮಗೆ ಮತ್ತು ಕುಟುಂಬ ಸದಸ್ಯರಿಗೆ ಕಿರುಕುಳ ನೀಡಲು ಯತ್ನಿಸುತ್ತಿದೆ ಎಂದು ದೂರಿದ್ದಾರೆ.
ಚೈತನ್ಯ ಬಘೇಲ್ ಅವರ ಹುಟ್ಟುಹಬ್ಬದಂದು ಬಂಧಿಸಲಾಗಿದೆ. ನಾವು ಈ ಕ್ರಮವನ್ನು ಬಲವಾಗಿ ಖಂಡಿಸುತ್ತೇವೆ. ವಿಧಾನಸಭೆಯ ಕಲಾಪಗಳನ್ನು ಬಹಿಷ್ಕರಿಸುತ್ತೇವೆ ಎಂದು ಮಹಂತ್ ಹೇಳಿದರು. ಬಳಿಕ ಭೂಪೇಶ್ ಬಘೇಲ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸದನದಿಂದ ಹೊರನಡೆದರು.
ಛತ್ತೀಸಗಢದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಇಂದು(ಶುಕ್ರವಾರ) ಕೊನೆಯ ದಿನವಾಗಿದೆ.
ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ(2019–2022) ಬಹುಕೋಟಿ ಮೊತ್ತದ ಅಬಕಾರಿ ಹಗರಣ ನಡೆದಿದೆ ಎಂದು ಇ.ಡಿ ಆರೋಪಿಸಿದೆ. ತನಿಖೆಯ ಭಾಗವಾಗಿ ವಿವಿಧ ಆರೋಪಿಗಳ ಸುಮಾರು ₹205 ಕೋಟಿ ಮೌಲ್ಯದ ಆಸ್ತಿಯನ್ನು ತನಿಖಾ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.