ADVERTISEMENT

ಗೌತಮ್ ಅದಾನಿ ಪಾಸ್‌ಪೋರ್ಟ್ ಮುಟ್ಟುಗೋಲಿಗೆ ಕಾಂಗ್ರೆಸ್ ಆಗ್ರಹ

ಪಿಟಿಐ
Published 6 ಫೆಬ್ರುವರಿ 2023, 14:23 IST
Last Updated 6 ಫೆಬ್ರುವರಿ 2023, 14:23 IST
ಗೌತಮ್ ಅದಾನಿ
ಗೌತಮ್ ಅದಾನಿ   

ಮುಂಬೈ: ಅದಾನಿ ಸಮೂಹವು ಅಕ್ರಮವಾಗಿ ಷೇರುಗಳ ಮೌಲ್ಯ ಏರಿಕೆ–ಇಳಿಕೆ ಮಾಡಿದ ಆರೋಪ ಎದುರಿಸುತ್ತಿದ್ದು, ವಿಜಯ್ ಮಲ್ಯ, ನೀರವ್ ಮೋದಿ ರೀತಿ ಗೌತಮ್ ಅದಾನಿ ದೇಶ ಬಿಟ್ಟು ಓಡಿಹೋಗುವುದನ್ನು ತಡೆಯಲು ಅವರ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ.

ಅದಾನಿ ಸಮೂಹದಲ್ಲಿ ಹೂಡಿಕೆ ಖಂಡಿಸಿ ಇಲ್ಲಿನ ಎಸ್‌ಬಿಐ ಮತ್ತು ಎಲ್‌ಐಸಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಸರ್ಕಾರವು ಪಾಸ್‌ಪೋರ್ಟ್, ವಶಕ್ಕೆ ಪಡೆಯದ ಹಿನ್ನೆಲೆಯಲ್ಲೇ ನೀರವ್ ಮೋದಿ, ವಿಜಯ್ ಮಲ್ಯ ದೇಶ ಬಿಟ್ಟು ಪರಾರಿಯಾದರು. ಅದೇ ರೀತಿ ಅದಾನಿ ವಿಷಯದಲ್ಲೂ ಆಗುವುದು ಬೇಡ ಎಂದು ಅವರು ಆಗ್ರಹಿಸಿದ್ದಾರೆ.

'ಕೇಂದ್ರ ಸರ್ಕಾರ ಕೂಡಲೇ ಗೌತಮ್ ಅದಾನಿಯವರ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆಗ ಅವರು ದೇಶ ಬಿಟ್ಟು ತೆರಳಲಾಗದು. ಹರ್ಷದ್ ಮೆಹ್ತಾ ಹಗರಣ ಬೆಳಕಿಗೆ ಬಂದಾಗ ಅಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಅವರು ದೇಶ ಬಿಟ್ಟು ತೆರಳಲು ಆಗಿರಲಿಲ್ಲ’ಎಂದು ಮುಂಬೈ ಕಾಂಗ್ರೆಸ್ ಅಧ್ಯಕ್ಷ ಭಾಯ್ ಜಗತಾಪ್ ವರದಿಗಾರರಿಗೆ ಹೇಳಿದರು.

ADVERTISEMENT

ಸಾಲದ ಸುಸ್ತಿದಾರರಾಗಿರುವ ಉದ್ಯಮಿಗಳಾದ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರ ಪಾಸ್‌ಪೋರ್ಟ್ ಅನ್ನು ಬಿಜೆಪಿ ಸರ್ಕಾರ ವಶಕ್ಕೆ ಪಡೆಯದ ಹಿನ್ನೆಲೆಯಲ್ಲಿಯೇ ಅವರು ದೇಶ ಬಿಟ್ಟು ಪರಾರಿಯಾಗಲು ಸಾಧ್ಯವಾಯಿತು. ಹಿಂಡನ್‌ಬರ್ಗ್ ವರದಿ ಬಳಿಕ ಅದಾನಿ ಸಮೂಹದ ಷೇರುಗಳ ಮೌಲ್ಯ ಕುಸಿದಿದೆ. ಈ ಸಂದರ್ಭ ಅದಾನಿಯೂ ಪರಾರಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.