ADVERTISEMENT

ನೆಹರೂ ಕುರಿತ ಹೇಳಿಕೆ: ರಾಜನಾಥ್ ಸಿಂಗ್ ಕ್ಷಮೆಗೆ ಕಾಂಗ್ರೆಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 14:40 IST
Last Updated 6 ಡಿಸೆಂಬರ್ 2025, 14:40 IST
ಜೈರಾಮ್‌ ರಮೇಶ್
ಜೈರಾಮ್‌ ರಮೇಶ್   

ನವದೆಹಲಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಕುರಿತ ಪುಸ್ತಕದಲ್ಲಿ ಅವರ ಪುತ್ರಿ ಉಲ್ಲೇಖಿಸಿರುವ ಡೈರಿ (ದಿನಚರಿ ಪುಸ್ತಕ) ಬರಹವನ್ನು ಮುಂದಿಟ್ಟು, ಜವಾಹರಲಾಲ್ ನೆಹರೂ ಅವರು ಜನರ ಹಣದಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದರು ಎಂದು ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದೆ.

‘ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಸಾರ್ವಜನಿಕ ಹಣ ಬಳಸಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದರು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದರು.

ಪುಸ್ತಕದಲ್ಲಿರುವ ಪಟೇಲ್‌ ಅವರ ಪುತ್ರಿ ಮಣಿಬೆನ್‌ ಅವರ ಡೈರಿಯ ಅಂಶಗಳನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕರು, ಸುಳ್ಳು ಸಂಗತಿಗಳನ್ನು ಹರಡುತ್ತಿರುವ ರಾಜನಾಥ್‌ ಸಿಂಗ್ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂವಹನ ವಿಭಾಗ ಉಸ್ತುವಾರಿ) ಜೈರಾಮ್‌ ರಮೇಶ್‌ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸ ಹೆಚ್ಚಿಸಿಕೊಳ್ಳಲು ಸಿಂಗ್ ಇಂತಹ ಸುಳ್ಳು ಸಂಗತಿ ಹರಡುತ್ತಿದ್ದಾರೆ’ ಎಂದು ಆರೋಪಿಸಿದರು. ಅಲ್ಲದೇ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಮೆಮೋರಿಯಲ್ ಸೊಸೈಟಿ ಪ್ರಕಟಿಸಿರುವ ಪುಸ್ತಕದ 212–213ನೇ ಪುಟಗಳನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.

‘ಮೂಲ ಡೈರಿಯಲ್ಲಿ ಪಟೇಲ್ ‍ಪುತ್ರಿ ಬರೆದಿರುವುದಕ್ಕೂ, ರಾಜನಾಥ್ ಸಿಂಗ್‌ ನೀಡಿರುವ ಹೇಳಿಕೆಗೂ ಹೋಲಿಕೆ ಇಲ್ಲ. ಸಿಂಗ್‌ ಮತ್ತು ಅವರ ಬೆಂಬಲಿಗರು ತಿರುಚಿದ ಸಂಗತಿಗಳನ್ನು ಪ್ರಚಾರ ಮಾಡುತ್ತಿದ್ದಾರೆ’ ಎಂದು ರಮೇಶ್‌ ಆರೋಪಿಸಿದ್ದಾರೆ.

ಗುಜರಾತ್‌ನ ಸಾಧ್ಲಿ ಗ್ರಾಮದಲ್ಲಿ ಮಂಗಳವಾರ ಮಾತನಾಡಿದಾಗ ರಾಜನಾಥ್ ಸಿಂಗ್, ನೆಹರೂ ಅವರನ್ನು ಕುರಿತು ಆರೋಪ ಮಾಡಿದ್ದರು. ಸಿಂಗ್‌ ಅವರ ಹೇಳಿಕೆ ಸಮರ್ಥಿಸಿಕೊಳ್ಳಲು ಬಿಜೆಪಿ ಮುಖಂಡರು ಪಟೇಲರ ಪುತ್ರಿಯ ಡೈರಿ ಆಧಾರಿತ ಪುಸ್ತಕವನ್ನೇ ಬಳಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.