ADVERTISEMENT

ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌: ಕಾಂಗ್ರೆಸ್‌ ಚಿಂತನ ಶಿಬಿರದಲ್ಲಿ ಪ್ರಸ್ತಾವ

ಕಾಂಗ್ರೆಸ್‌ ಚಿಂತನ ಶಿಬಿರದಲ್ಲಿ ಹಲವು ಪ್ರಸ್ತಾವಗಳ ಮಂಡನೆ

​ಪ್ರಜಾವಾಣಿ ವಾರ್ತೆ
Published 13 ಮೇ 2022, 20:56 IST
Last Updated 13 ಮೇ 2022, 20:56 IST
ಚಿಂತನ ಶಿಬಿರದಲ್ಲಿ ಸೋನಿಯಾ ಗಾಂಧಿ ಮಾತು –ಪಿಟಿಐ ಚಿತ್ರ
ಚಿಂತನ ಶಿಬಿರದಲ್ಲಿ ಸೋನಿಯಾ ಗಾಂಧಿ ಮಾತು –ಪಿಟಿಐ ಚಿತ್ರ   

ಉದಯಪುರ: ‘ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌’ ಎಂಬ ನಿಯಮವನ್ನು ಕಾಂಗ್ರೆಸ್‌ ಪಕ್ಷವು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಒಂದೇ ಕುಟುಂಬದ ಎರಡನೇ ವ್ಯಕ್ತಿಯು ಕನಿಷ್ಠ ಐದು ವರ್ಷ ಪಕ್ಷ ಸಂಘಟನೆಯಲ್ಲಿ ‘ಅಸಾಧಾರಣ ರೀತಿ’ಯಲ್ಲಿ ಕೆಲಸ ಮಾಡಿದ್ದರೆ ಅಂಥವರಿಗೆ ಈ ನಿಯಮದಿಂದ ವಿನಾಯಿತಿ ಇದೆ. ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಚಿಂತನ ಶಿಬಿರದಲ್ಲಿ ಈ ಪ್ರಸ್ತಾವವನ್ನು ಶುಕ್ರವಾರ ಮುಂದಿಡಲಾಗಿದೆ.

ಮುಖಂಡರು ಯಾವುದೇ ಹುದ್ದೆಗೆ ದೀರ್ಘ ಕಾಲ ಅಂಟಿಕೊಳ್ಳುವುದಕ್ಕೂ ತಡೆ ಒಡ್ಡುವ ಪ್ರಸ್ತಾವ ಇದೆ. ಗರಿಷ್ಠ ಐದು ವರ್ಷ ಒಂದು ಹುದ್ದೆಯಲ್ಲಿ ಇರಬಹುದು. ನಂತರ ಮೂರು ವರ್ಷ ಅವರು ಯಾವುದೇ ಹುದ್ದೆ ಹೊಂದುವಂತಿಲ್ಲ. ಕಾರ್ಯದಕ್ಷತೆಯ ಮೇಲೆ ನಿಗಾ ಇರಿಸುವುದಕ್ಕಾಗಿ ಮೌಲ್ಯಮಾಪನ ವಿಭಾಗ ಮತ್ತು ಕಾಲ ಕಾಲಕ್ಕೆ ಸಮೀಕ್ಷೆ ನಡೆಸುವುದು ಹಾಗೂ ಇತರ ಮಹತ್ವ ವಿಚಾರಗಳಿಗೆ ಗಮನ ಹರಿಸಲು ಸಾರ್ವಜನಿಕ ಒಳನೋಟ ಗುಂಪು ರಚನೆಯ ಸಲಹೆಯೂ ಶಿಬಿರದಲ್ಲಿ ಮಂಡನೆ ಆಗಿದೆ.

ಚಿಂತನ ಶಿಬಿರವು ಕಾಂಗ್ರೆಸ್‌ ಪಕ್ಷದಲ್ಲಿ ಹೊಸ ಯುಗವೊಂದನ್ನು ಆರಂಭಿಸಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಜಯ ಮಾಕನ್‌ ಹೇಳಿದ್ದಾರೆ.

ADVERTISEMENT

‘ಸಮಯ ಬದಲಾಗುತ್ತಿದೆ. ಆದರೆ, ಕಾಲದ ಜತೆಗೆ ಬದಲಾಗಲು ನಮಗೆ ಸಾಧ್ಯವಾಗಿಲ್ಲ’ ಎಂದು ಅವರು ಹೇಳಿದ್ದಾರೆ.

‘ಒಂದು ಕುಟುಂಬ ಒಂದು ಟಿಕೆಟ್‌’ ಪ್ರಸ್ತಾವದ ವಿಚಾರದಲ್ಲಿ ಬಹುತೇಕ ಸಹಮತ ಏರ್ಪಟ್ಟಿದೆ. ಪಕ್ಷದ ಹಿರಿಯ ಮುಖಂಡರ ಮಕ್ಕಳು ಅಥವಾ ಸಂಬಂಧಿಕರು ನೇರವಾಗಿ ಬಂದು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ. ಈ ನಿಯಮವು ಗಾಂಧಿ–ನೆಹರೂ ಕುಟುಂಬಕ್ಕೂ ಅನ್ವಯ ಆಗುತ್ತದೆ’ ಎಂದು ಮಾಕನ್‌ ತಿಳಿಸಿದ್ದಾರೆ.

ಪಕ್ಷದ ಮುಖಂಡರ ಕುಟುಂಬದ ಸದಸ್ಯರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಲಾಗುತ್ತಿದೆ ಎಂಬ ಆರೋಪದ ಕಾರಣಕ್ಕೆ ಈ ನಿಯಮ ರೂಪಿಸಲಾಗಿದೆ. ಹಾಗಾಗಿ, ಈ ನಿಯಮವು ಅನುಮೋದನೆಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ಶೇ 50ರಷ್ಟು ಟಿಕೆಟ್‌ಗಳನ್ನು 50 ವರ್ಷದ ಒಳಗಿನವರಿಗೆ ಮೀಸಲು ಇರಿಸುವ ಪ್ರಸ್ತಾವವೂ ಇದೆ. ತಾಲ್ಲೂಕು ಮತ್ತು ಮತಗಟ್ಟೆ ಮಟ್ಟದ ಸಮಿತಿಗಳ ನಡುವೆ ಮಂಡಲ ಸಮಿತಿಗಳನ್ನು ರಚಿಸುವ ಸಲಹೆಯೂ ಪರಿಶೀಲನೆಯಲ್ಲಿದೆ.

ಕಾರ್ಯಕರ್ತರಿಂದ ದೇಣಿಗೆ: ಪ್ರತಿ ತಿಂಗಳೂ ಪಕ್ಷಕ್ಕೆ ನಿಶ್ಚಿತ ಮೊತ್ತವನ್ನು ದೇಣಿಗೆ ನೀಡುವ ಕಾರ್ಯಕರ್ತರನ್ನು ಗುರುತಿಸಬೇಕು ಎಂಬ ಸಲಹೆಯನ್ನು ಕಾಂಗ್ರೆಸ್‌ನ ಕೇರಳ ಘಟಕವು ಮುಂದಿಟ್ಟಿದೆ. ಸಿಪಿಎಂನಲ್ಲಿ ಇಂತಹ ವ್ಯವಸ್ಥೆ ಇದ್ದು, ಕೇರಳ ಘಟಕವು ಅದರಿಂದಲೇ ಪ್ರಭಾವಿತವಾದಂತೆ ಕಾಣಿಸುತ್ತಿದೆ. 15–20 ಕುಟುಂಬಗಳನ್ನು ಸೇರಿಸಿ ಘಟಕ ಸಮಿತಿಗಳನ್ನು ರಚಿಸುವ ಪ್ರಸ್ತಾವವೂ ಇದೆ. ಇದು ಕೂಡ ಸಿಪಿಎಂನಿಂದ ಪ್ರೇರಿತವಾದ ಚಿಂತನೆ.

ನಿರ್ದಿಷ್ಟ ಪಠ್ಯಕ್ರಮವನ್ನು ಹೊಂದಿರುವ ರಾಜಕೀಯ ಶಾಲೆ ಸ್ಥಾಪನೆಯ ಸಲಹೆಯೂ ಬಂದಿದೆ. ಕಾಂಗ್ರೆಸ್‌ನ ಸಿದ್ಧಾಂತ, ಶಿಸ್ತು, ಕಾರ್ಯತಂತ್ರ, ಭಾರತದ ಸಂವಿಧಾನ ಮುಂತಾದ ವಿಷಯಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಇದು ತರಬೇತಿ ನೀಡಲಿದೆ. ಪಕ್ಷದ ಎಲ್ಲ ಕಾರ್ಯಕರ್ತರಿಗೆ ಈ ತರಬೇತಿಯು ಕಡ್ಡಾಯ ಎಂದು ಹೇಳಲಾಗಿದೆ. ಚಿಂತನ ಶಿಬಿರವು ಶನಿವಾರ ಮತ್ತು ಭಾನುವಾರವೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.