ಕಾಂಗ್ರೆಸ್
ನವದೆಹಲಿ: ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷವು ಪ್ರಚಾರ ಸಮಿತಿಯನ್ನು ಶನಿವಾರ ರಚಿಸಿದೆ. ಎಐಸಿಸಿ ಖಜಾಂಚಿ ಅಜಯ್ ಮಾಕೆನ್ ಅವರನ್ನು ಈ ಸಮಿತಿಯ ಸಂಚಾಲಕರಾಗಿ ನೇಮಿಸಲಾಗಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ಹೇಳಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಮಿತಿ ರಚಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಜೈರಾಮ್ ರಮೇಶ್ ಮತ್ತು ಕೆ.ಸಿ. ವೇಣುಗೋಪಾಲ್, ಎಐಸಿಸಿ ಆಡಳಿತ ಉಸ್ತುವಾರಿ ಗುರುದೀಪ್ ಸಿಂಗ್ ಸಪ್ಪಲ್, ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮತ್ತು ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.
ಸಮಿತಿ ಜೊತೆಗೆ, ಕೇಂದ್ರ ವಾರ್ ರೂಂ ಅನ್ನು ಕೂಡಾ ಪಕ್ಷ ನಿಯೋಜಿಸಿದೆ. ಸಂವಹನ ವಾರ್ ರೂಂ ಅನ್ನು ವೈಭವ್ ವಾಲಿಯಾ ಮತ್ತು ಸಂಘಟನೆ ವಾರ್ ರೂಂ ಅನ್ನು ಶಶಿಕಾಂತ್ ಸೆಂಥಿಲ್ ಎಸ್. ಮುನ್ನಡೆಸಲಿದ್ದಾರೆ. ವರುಣ್ ಸಂತೋಷ್, ಗೋಕುಲ್ ಬುಟೇಲ್, ನವೀನ್ ಶರ್ಮಾ ಮತ್ತು ಕ್ಯಾಪ್ಟನ್ ಅರವಿಂದ್ ಕುಮಾರ್ ಅವರು ಸಂಘಟನೆ ವಾರ್ ರೂಂನ ಉಪಾಧ್ಯಕ್ಷರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲೋಕಸಭೆ ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿ ತಯಾರಿಸಲು ಐದು ಸ್ಕ್ರೀನಿಂಗ್ ಸಮಿತಿಯನ್ನು ರಚಿಸಿದ ಮರುದಿನವೇ ಪ್ರಚಾರ ಸಮಿತಿ ರಚಿಸಲಾಗಿದೆ. ಇದಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಐದು ಸಮೂಹಗಳಾಗಿ ಪಕ್ಷ ವಿಭಾಗಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.