
ತಿರುವನಂತಪುರ: ಬಿಹಾರ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ನನ್ನನ್ನು ಆಹ್ವಾನಿಸಿಲ್ಲ ಎಂದಿರುವ ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್, ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಕಾರಣದ ಬಗ್ಗೆ ಆತ್ಮವಿಮರ್ಶೆ ನಡೆಯಬೇಕಿದೆ ಎಂದಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ವರದಿಗಾರರ ಜೊತೆ ಮಾತನಾಡಿದ ಅವರು, ಸೋಲಿನ ಕುರಿತಂತೆ ಸಂಪೂರ್ಣ ಪರಿಶೀಲನೆ ನಡೆಸಬೇಕಾದ ಹೊಣೆ ಪಕ್ಷದ ಮೇಲಿದೆ. ಆರ್‌ಜೆಡಿ ಸಹ ತನ್ನ ಪ್ರದರ್ಶನದ ಬಗ್ಗೆ ಜಾಗರೂಕತೆಯಿಂದ ವಿಮರ್ಶಿಸಬೇಕಿದೆ ಎಂದಿದ್ದಾರೆ.
ಬಿಹಾರದಂತಹ ಜನಾದೇಶದಲ್ಲಿ, ಪಕ್ಷದ ಸಂಪೂರ್ಣ ಕಾರ್ಯಕ್ಷಮತೆಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ. ಚುನಾವಣೆಗಳು ಹಲವಾರು ಅಂಶಗಳ ಮೇಲೆ ಆಧಾರಿತವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.
‘ಪಕ್ಷದ ಸಂಘಟನೆಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಪ್ರಶ್ನೆಗಳಿವೆ. ಜನರು ಕಳುಹಿಸಿರುವ ಸಂದೇಶದ ಪ್ರಶ್ನೆ ಇದೆ. ಈ ಎಲ್ಲವಿಷಯಗಳು ಚರ್ಚೆ ಆಗಬೇಕಿದೆ. ಫಲಿತಾಂಶಗಳನ್ನು ಕೂಲಂಕಷವಾಗಿ ವಿಶ್ಲೇಷಿಸಲಾಗುತ್ತದೆ’ ಎಂದು ತರೂರ್ ಹೇಳಿದ್ದಾರೆ.
‘ನಾನು ಬಿಹಾರಕ್ಕೆ ಹೋಗಿರಲಿಲ್ಲ.ಪ್ರಚಾರಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ. ಆದ್ದರಿಂದ ನಾನು ವೈಯಕ್ತಿಕ ಅನುಭವದಿಂದ ಹೆಚ್ಚಿನದನ್ನು ಹೇಳಲಾರೆ. ಅಲ್ಲಿದ್ದವರು ಖಂಡಿತವಾಗಿಯೂ ಫಲಿತಾಂಶದ ಬಗ್ಗೆ ಅಧ್ಯಯನ ಮಾಡುತ್ತಾರೆ’ ಎಂದು ಅವರು ಹೇಳಿದರು.
ಈ ಮಧ್ಯೆ, ಪಕ್ಷದಲ್ಲಿನ ವಂಶಪಾರಂಪರ್ಯ ರಾಜಕಾರಣ ಬಗ್ಗೆ ಇತ್ತೀಚೆಗೆ ತಾವು ಬರೆದಿದ್ದ ಲೇಖನಕ್ಕಾಗಿ ತರೂರ್, ಹಿರಿಯ ಕಾಂಗ್ರೆಸ್ ನಾಯಕ ಎಂ..ಎಂ. ಹಸನ್ ಅವರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ತರೂರ್ ಅವರು ನೆಹರೂ ಕುಟುಂಬದ ಬೆಂಬಲದೊಂದಿಗೆ ರಾಜಕೀಯ ಪ್ರವೇಶಿಸಿ ಎಲ್ಲ ಅಧಿಕಾರ ಅನುಭವಿಸಿದ್ದಾರೆ ಎಂದೂ ಹಸನ್ ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.