ADVERTISEMENT

'ಅಪ್ಪನನ್ನು ಅವಮಾನಿಸಿದ ವ್ಯಕ್ತಿಯನ್ನು ಆಲಿಂಗನ ಮಾಡುವ ಗೈರತ್ತು ರಾಹುಲ್‍ಗೆ ಇದೆ'

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 4:29 IST
Last Updated 21 ಏಪ್ರಿಲ್ 2019, 4:29 IST
   

ಮಾನಂತವಾಡಿ:ದಶಕಗಳ ಹಿಂದಿನಿಂದಲೇನನ್ನ ಸಹೋದರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ವಿಪಕ್ಷಗಳು ತಪ್ಪಾಗಿ ಚಿತ್ರಿಸುತ್ತಾ ಬಂದಿವೆ.ಆದರೆ ನನ್ನ ಅಪ್ಪ ಮತ್ತು ಅಮ್ಮನನ್ನು ಅವಮಾನಿಸಿದ ವ್ಯಕ್ತಿಯನ್ನು ಆಲಿಂಗನ ಮಾಡುವ ಗೈರತ್ತು ರಾಹುಲ್‍ಗೆ ಇದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂರಾ ಗಾಂಧಿ ವಾದ್ರಾ ಹೇಳಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯದ ವೇಳೆ ರಾಹುಲ್, ಮೋದಿಯನ್ನು ಆಲಿಂಗಿಸಿದ್ದನ್ನು ಉಲ್ಲೇಖಿಸಿ ಪ್ರಿಯಾಂಕಾ ಈ ರೀತಿ ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಚುನಾವಣಾ ಪ್ರಚಾರ ನಡೆಸಿದ ಪ್ರಿಯಾಂಕಾ, ಶನಿವಾರ ಕೇರಳದ ವಯನಾಡಿನ ಮಾನಂತವಾಡಿಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.

ADVERTISEMENT

ಭಾವುಕರಾಗಿ ಭಾಷಣ ಮಾಡಿದ ಪ್ರಿಯಾಂಕಾ ತನ್ನ ಸಹೋದರನನ್ನು ವಿಪಕ್ಷಗಳು ತಪ್ಪಾಗಿ ಚಿತ್ರಿಸಿವೆ.ಅಗಲಿಕೆಯ ದುಃಖವನ್ನು ನಾವು ಜತೆಯಾಗಿ ಅನುಭವಿಸಿದ್ದೇವೆ.ತುಂಬಲಾರದ ನಷ್ಟ ಆಗಿದ್ದರೂ ನಾವು ಯಾರ ಮೇಲೂ ಸಿಟ್ಟು ತೋರಿಸಿಲ್ಲ. ನಾನು ಇಲ್ಲಿ ನನ್ನ ಸಹೋದರ ಮತ್ತು ಉತ್ತಮ ಸ್ನೇಹಿತನ ಪರ ಮತ ಕೇಳಲು ಬಂದಿದ್ದೇನೆ. ರಾಹುಲ್ ಬ್ಲಾಕ್ ಬೆಲ್ಟ್, ನುರಿತ ಪೈಲಟ್ ಮತ್ತು ಪರ್ವತಾರೋಹಿ. ಅವನಿಗೆ ಪ್ರಚಾರ ಇಷ್ಟ ಇಲ್ಲ. ನಾನು ಈ ರೀತಿ ಹೇಳಿರುವುದು ಕೂಡಾ ಅವನಿಗೆ ಇಷ್ಟವಾಗಲಿಕ್ಕಿಲ್ಲ.ಅವನಿಗೆ ಈ ದೇಶದ ಇತಿಹಾಸ ಮತ್ತು ಪುರಾಣಗಳು ಗೊತ್ತು.ಅವನಿಗೆ ನಂಬಿಕೆ ಮತ್ತು ಸಂಸ್ಕೃತಿ ಬಗ್ಗೆ ಆಳವಾದ ಜ್ಞಾನವಿದೆ ಎಂದಿದ್ದಾರೆ.

ದುರಂತಗಳಿಂದ ಭಯಭೀತರಾಗಿರುವ ಕುಟುಂಬ ನಮ್ಮದಾಗಿದ್ದರೂ, ನನ್ನ ಸಹೋದರ ಸಿಟ್ಟು ಮಾಡಿಕೊಳ್ಳುವುದಿಲ್ಲ.
ಇಂದಿರಾ ಜೀ ನಮಗೆ ಅಮ್ಮನಂತೆ ಇದ್ದರು. ನಾನು 12 ವರ್ಷದವಳಾಗಿದ್ದಾಗ ಅವರ ಹತ್ಯೆಯಾಯಿತು. ನಾಲ್ಕು ಜನರ ಕುಟುಂಬ ನಮ್ಮದು. ಇಂದಿರಾ ಹತ್ಯೆಯಾಗಿ 6 ವರ್ಷಗಳಾಗಿತ್ತು. ನನ್ನ ಸಹೋದರ ಹಾರ್ವರ್ಡ್‌ನಲ್ಲಿ ಕಲಿಯುತ್ತಿದ್ದಾಗ ನನ್ನ ಅಪ್ಪನ ಹತ್ಯೆಯಾಯಿತು. ಇಷ್ಟೊಂದು ವೈಯಕ್ತಿಕ ನಷ್ಟಗಳನ್ನು ಅನುಭವಿಸಿದ್ದರೂ ನನ್ನ ಸಹೋದರ ಯಾರ ಬಗ್ಗೆಯೂ ಸಿಟ್ಟು ತೋರಿಸಿಲ್ಲ.
ನನ್ನ ಸಹೋದರನ ಗೆಲುವು ನಿಮ್ಮ ಕೈಯಲ್ಲಿದೆ ಎಂದ ಪ್ರಿಯಾಂಕಾ, ರಾಹುಲ್ ಗಾಂಧಿಯಂತೆ ತಮ್ಮ ಭಾಷಣದಲ್ಲಿ ಬಿಜೆಪಿಯ ವಿರುದ್ಧ ಟೀಕೆ ಮಾಡಿದರೇ ಹೊರತು ಎಡಪಕ್ಷಗಳ ವಿರುದ್ಧಏನೂ ಹೇಳಲಿಲ್ಲ.

ಬಿಜೆಪಿ ಸರ್ಕಾರ ದೇಶವನ್ನು ಒಡೆಯುತ್ತಿದೆ.ತುಂಬಾ ನಿರೀಕ್ಷೆಗಳಿಂದ ಜನರು ಅವರಿಗೆ 5 ವರ್ಷ ಅಧಿಕಾರ ನೀಡಿದ್ದರು.ಆದರೆ ಅವರು ಜನರನ್ನು ಮೋಸ ಮಾಡಿದರು ಎಂದು ಪ್ರಿಯಾಂಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.